ಕರಾವಳಿ

ಮತ್ತೆ ಮೊಳಗಲಿದೆ ದ್ವೀಪದಲ್ಲಿ ಗಂಡು ಕಲೆಯ ಚೆಂಡೆ : ದ್ವೀಪದ ಯಕ್ಷಗಾನ ಪ್ರೇಮಿಗಳಿಗೆ “ಯಕ್ಷ ಸಂಭ್ರಮ”ದ ರಸದೌತಣ

Pinterest LinkedIn Tumblr

ಬಹರೈನ್; ಇದೆ ಅಕ್ಟೋಬರ್ ತಿಂಗಳ 25 ನೇ ತಾರೀಖಿನ ಶುಕ್ರವಾರದಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಬಹರೈನ್ -ಸೌದಿ ಅರೇಬಿಯಾ ಘಟಕ ಆಯೋಜಿಸಿರುವ “ಯಕ್ಷ ಸಂಭ್ರಮ ” ಕಾರ್ಯಕ್ರಮಕ್ಕೆ ಇದಾಗಲೇ ಕ್ಷಣಗಣನೆ ಆರಂಭವಾಗಿದೆ.

ನಾಡಿನ ಯಕ್ಷಲೋಕದ ದಿಗ್ಗಜ ಕಲಾವಿದರುಗಳ ಅಪೂರ್ವ ಸಂಗಮದೊಂದಿಗೆ ದ್ವೀಪದ ಹಾಗು ಸೌದಿ ಅರೇಬಿಯಾದ ಹವ್ಯಾಸಿ ಯಕ್ಷಗಾನ ಕಲಾವಿದರು “ಶ್ರೀಕೃಷ್ಣ ಲೀಲೆ-ಕಂಸವಧೆ ” ಹಾಗು “ಸತ್ಯ ಹರಿಶ್ಚಂದ್ರ ” ಎಂಬ ಎರಡು ಎರಡು ಅಮೋಘ ಕನ್ನಡ ಪೌರಾಣಿಕ ಪ್ರಸಂಗಗಳನ್ನು ಆಡಿತೊರಿಸಲಿದ್ದು ಈ ಯಕ್ಷಗಾನ ಕಾರ್ಯಕ್ರಮವು ಇಲ್ಲಿನ ‘ಮನಾಮ ‘ ಪರಿಸರದಲ್ಲಿರುವ ಇಂಡಿಯನ್ ಕ್ಲಬ್ಬಿನ ನ ಭವ್ಯ ಸಭಾಂಗಣದಲ್ಲಿ ಅಪರಾಹ್ನ 2 ಘಂಟೆಯಿಂದ ಸಂಜೆ 10 ರ ತನಕ ಪ್ರದರ್ಶನ ಕಾಣಲಿದೆ.

ನಾಡಿನ ಯಕ್ಷಲೋಕದ ದಿಗ್ಗಜರುಗಳು ಹಾಗು ಇಲ್ಲಿನ ಹವ್ಯಾಸಿ ಕಲಾವಿದರುಗಳ ಸಮಾಗಮದ ಈ ಯಕ್ಷಗಾನ ಪ್ರದರ್ಶನವು ದ್ವೀಪದ ಯಕ್ಷಪ್ರೇಮಿಗಳನ್ನು ರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಮಧ್ಯಾಹ್ನ 2 ಘಂಟೆಗೆ ಸರಿಯಾಗಿ ಚಾಲನೆಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಸೌದಿ ಅರೇಬಿಯಾದ ಹವ್ಯಾಸಿ ಕಲಾವಿದರುಗಳು ಹಾಗು ನಾಡಿನ ಹೆಸರಾಂತ ಯಕ್ಷ ದಿಗ್ಗಜರುಗಳ ಕಲಾವಿದರುಗಳ ಸಮಾಗಮದೊಂದಿಗೆ ಶ್ರೀಮತಿ ಸೌಜನ್ಯಾ ಮೈರ್ಪಾಡಿ ಹಾಗು ಶ್ರೀ ರೋಷನ್ ಕೋಟ್ಯಾನ್ ರವರ ನಿರ್ದೇಶನದಲ್ಲಿ “ಶ್ರೀಕೃಷ್ಣ ಲೀಲೆ-ಕಂಸವಧೆ ” ಎಂಬ ಪ್ರಸಂಗವು ಪ್ರದರ್ಶನಗೊಂಡರೆ ಸಭಾಕಾರ್ಯಕ್ರಮದ ನಂತರ ಬಹರೈನಿನ ಹವ್ಯಾಸಿ ಕಲಾವಿದರುಗಳು ಹಾಗು ನಾಡಿನ ಹೆಸರಾಂತ ಯಕ್ಷಗಾನ ಕಲಾವಿದರುಗಳ ಕೂಡುವಿಕೆಯೊಂದಿಗೆ ಶ್ರೀ ದೀಪಕ್ ರಾವ್ ಪೇಜಾವರ ಇವರ ನಿರ್ದೇಶನದಲ್ಲಿ “ಸತ್ಯ ಹರಿಶ್ಚಂದ್ರ ” ಎಂಬ ಪ್ರಸಂಗವು ಪ್ರದರ್ಶನ ಕಾಣಲಿರುವುದು.

ಪಟ್ಲ ಫಾಂಡೇಷನ್ ನ ಸ್ಥಾಪಕಾಧ್ಯಕ್ಷ ನಾಡಿನ ಪ್ರಖ್ಯಾತ ಯುವ ಭಾಗವತ ಯಕ್ಷಧ್ರುವ ಪಟ್ಲಾ ಸತೀಶ್ ಶೆಟ್ಟಿ , ಹಿಮ್ಮೇಳ ವಾದಕರಾದ ಚಂದ್ರಶೇಖರ್ ಕೊಂಕಣಾಜೆ ,ಗುರುಪ್ರಸಾದ್ ಬೊಳಿಂಜಡ್ಕ ,ಮುಮ್ಮೇಳದಲ್ಲಿ ಹಳ್ಳಾಡಿ ಜಯರಾಮ ಶೆಟ್ಟಿ ,ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ,ಸುಷ್ಮಾ ಮೈರ್ಪಾಡಿ ಅತಿಥಿ ಕಲಾವಿದರುಗಳಾಗಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರವೇಶ ಮುಕ್ತವಾಗಿದ್ದು ದ್ವೀಪದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಯಕ್ಷಗಾನ ಕಾರ್ಯಕ್ರಮ ವನ್ನು ಚೆಂದಗಾಣಿಸಿಕೊಡಬೇಕೆಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಬಹರೈನ್ -ಸೌದಿ ಅರೇಬಿಯಾ ಘಟಕ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಯವರು ಕರೆ ನೀಡಿದ್ದಾರೆ . ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಕುಂದಾಪುರದ ಯುವ ಉದ್ಯಮಿ ,ಸಮಾಜ ಸೇವಕ ಶ್ರೀ ಅಭಿನಂದನ್ ಶೆಟ್ಟಿ ಯವರು ಪಾಲ್ಗೊಳ್ಳಲಿದ್ದು ,ಗಣ್ಯರುಗಳ ಉಪಸ್ಥಿತಿಯಲ್ಲಿ ಸಾಧಕರುಗಳನ್ನು ಸಮ್ಮಾನಿಸುವ ಕಾರ್ಯಕ್ರಮವು ಜರುಗಲಿದೆ.

ಈ ಕಾರ್ಯಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಘಟಕದ ಅಧ್ಯಕ್ಷ ಶ್ರೀ ರಾಜೇಶ್ .ಬಿ .ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 38902807 ಮುಖೇನ ಸಂಪರ್ಕಿಸಬಹುದಾಗಿದೆ .

ವರದಿ-ಕಮಲಾಕ್ಷ ಅಮೀನ್ .

Comments are closed.