ಕರಾವಳಿ

ನಿಧಿಯಾಗಿ ಸಿಕ್ಕ ಚಿನ್ನದ ನಾಣ್ಯ ನೀಡುವುದಾಗಿ 10 ಲಕ್ಷ ಉಂಡೆನಾಮ ಹಾಕಿದ ಖದೀಮರು!

Pinterest LinkedIn Tumblr

ಉಡುಪಿ: ನಿಧಿಯಾಗಿ ಸಿಕ್ಕ ಚಿನ್ನದ ನಾಣ್ಯ ರಿಯಾಯತಿ ದರದಲ್ಲಿ ನೀಡುವುದಾಗಿ ನಂಬಿಸಿ ನಕಲಿ ನಾಣ್ಯ ಕೊಟ್ಟು ಹತ್ತು ಲಕ್ಷ ಮೋಸ ಮಾಡಿದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಮೋಸ ಹೋದ ವ್ಯಕ್ತಿ ದೂರು ನೀಡಿದ್ದಾರೆ. ಉಡುಪಿ ಜಿಲ್ಲೆ ತೆಕ್ಕಟ್ಟೆ ನಿವಾಸಿ ಉದಯ ಮೆಂಡನ್ (43) ಮೋಸ ಹೋದವರು.

ಘಟನೆ ವಿವರ: ತೆಕ್ಕಟ್ಟೆ ಕೆನರಾ ಬ್ಯಾಂಕ್ ಎದುರುಗಡೆ ಮೀನಿನ ಅಂಗಡಿ ಇಟ್ಟುಕೊಂಡಿರುವ ಉದಯ್ ಅವರ ಮೊಬೈಲಿಗೆ 2 ತಿಂಗಳ ಹಿಂದೆ ಮಹೇಶ್ ಎಂಬಾತ ಕರೆ ಮಾಡಿದ್ದು ತನ್ನ ಬಳಿ ನಿಧಿಯಾಗಿ ಸಿಕ್ಕಿದ ಚಿನ್ನವಿದ್ದು ಅದನ್ನು ರಿಯಾಯಿತಿ ದರದಲ್ಲಿ ಕೊಡುವೆ ಎಂದು ನಂಬಿಸಿ ತಾನು ಹೇಳಿದಲ್ಲಿಗೆ ಬಂದರೆ ಚಿನ್ನದ ನಾಣ್ಯ ಸ್ಯಾಂಪಲ್ ನೀಡುವುದಾಗಿ ತಿಳಿಸಿದ್ದ. ಅದರಂತೆಯೇ ಉದಯ್ ಅವರು ಆರೋಪಿ ಹೇಳಿದಂತೆ ಆ.20ರಂದು ಹೊಸಪೇಟೆ ತಲುಪಿ ಮಹೇಶನ ಮೊಬೈಲ್‌ಗೆ ಕರೆ ಮಾಡಿದಾಗ ಹೊಸಪೇಟೆ ಬಸ್ ನಿಲ್ದಾಣದಿಂದ 10 ಕಿ.ಮೀ ದೂರದ ಊರಿಗೆ ಬರಲು ತಿಳಿಸಿದಂತೆ ಸ್ಥಳಕ್ಕೆ ಹೋದಲ್ಲಿ 35 ವರ್ಷ ಪ್ರಾಯದ ಇಬ್ಬರು ವ್ಯಕ್ತಿಗಳು ನಿಂತಿದ್ದು ಅವರಲ್ಲಿ ಓರ್ವ ತನ್ನನ್ನು ಮಹೇಶ್ ಎಂದು ಪರಿಚಯಿಸಿಕೊಂಡು 2 ಚಿನ್ನದ ನಾಣ್ಯ ಸ್ಯಾಂಪಲ್ ಆಗಿ ನೀಡಿದ್ದು ಅದನ್ನು ಪರೀಕ್ಷಿಸಿ ನಂತರ ಹೇಳಿದರೆ ಇನ್ನೂ ಹೆಚ್ಚಿನ ನಾಣ್ಯಗಳನ್ನು ಕೊಡುವುದಾಗಿ ಹೇಳಿದ್ದ. ಅದರಂತೆಯೇ ಉದಯ್ 2 ಚಿನ್ನದ ನಾಣ್ಯಗಳೊಂದಿಗೆ ತೆಕ್ಕಟ್ಟೆಯ ಮನೆಗೆ ಬಂದು ಕೋಟ ಶ್ರೀದೇವಿ ಜ್ಯುವೆಲ್ಲರ್ಸ್‌ನ ಅವರ ಸ್ನೇಹಿತ ಸೀತಾರಾಮ ಆಚಾರ್ಯ ಅವರಲ್ಲಿ ಹೋಗಿ ವಿಚಾರವನ್ನು ತಿಳಿಸಿ ಚಿನ್ನದ ನಾಣ್ಯದ ನೈಜತೆಯ ಬಗ್ಗೆ ಪರೀಕ್ಷಿಸಿದ್ದು ಅದೆರಡು ನೈಜ ಚಿನ್ನದ ನಾಣ್ಯಗಳಾಗಿತ್ತು. ಬಳಿಕ ಮಹೇಶ್ ಮತ್ತೆ ನಿತ್ಯವೂ ಕರೆ ಮಾಡಿ ಉಳಿದ ಚಿನ್ನದ ನಾಣ್ಯಗಳನ್ನು ತೆಗೆದುಕೊಂಡು ಹೋಗುವಂತೆ ಒತ್ತಾಯಿಸುತ್ತಿದ್ದ. ಉದಯ್ ತನ್ನ ಬಳಿ ಹಣವಿಲ್ಲ ಎಂದಾಗ ಮುಂಗಡವಾಗಿ 10 ಲಕ್ಷ ನೀಡಿ ಉಳಿದ 15 ಲಕ್ಷವನ್ನು ಎರಡು ತಿಂಗಳ ನಂತರ ಕೊಡುವಂತೆಯೂ ತಿಳಿಸಿದ್ದ. ಈ ವಿಚಾರವನ್ನು ಉದಯ್ ತನ್ನ ಸ್ನೇಹಿತ ಸೀತಾರಾಮ ಆಚಾರ್ಯರಿಗೆ ತಿಳಿಸಿದ್ದು ಇದಕ್ಕೆ ಒಪ್ಪಿಕೊಂಡಿದ್ದು ಇಬ್ಬರೂ ಕೂಡ ತಲಾ 5 ಲಕ್ಷಗಳಂತೆ ಒಟ್ಟು 10 ಲಕ್ಷ ರೂಪಾಯಿ ಹೊಂದಿಸಿಕೊಂಡು ಸೆ.20ರಂದು ಚಿನ್ನ ಖರೀದಿಸಲು ಚಿತ್ರದುರ್ಗ ಬಸ್ ನಿಲ್ದಾಣಕ್ಕೆ ಹೋಗಿದ್ದು ಮಹೇಶನಿಗೆ ಕರೆ ಮಾಡಿದಾಗ ಮೊದಲಿಗೆ ಮೊಳಕಾಲ್ಮೂರಿನ ಬಸ್ ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದ. ಅಲ್ಲಿಗೆ ಹೋಗಿ ಪುನಃ ಕರೆ ಮಾಡಿದಾಗ ಮಹೇಶನು ಉದಯ್ ಒಬ್ಬರೆ ಬರುವಂತೆ ತಿಳಿಸಿದ್ದು ಅಲ್ಲಿಂದ ಹತ್ತಿರದ ಸ್ಥಳಕ್ಕೆ ಹೋದಾಗ ಮಹೇಶ್ ಅಲ್ಲಿಗೆ ಬಂದು ಆತನಲ್ಲಿದ್ದ ಒಂದು ಸಾವಿರಕ್ಕಿಂತ ಹೆಚ್ಚು ಚಿನ್ನದ ನಾಣ್ಯಗಳನ್ನು ತೋರಿಸಿದ್ದ. ಅದನ್ನು ಕಂಡ ಬಳಿಕ ಉದಯ್ ತನ್ನಲ್ಲಿದ್ದ 10 ಲಕ್ಷ ರೂಪಾಯಿಗಳನ್ನು ಮಹೇಶನಿಗೆ ಕೊಟ್ಟು ಚಿನ್ನದ ನಾಣ್ಯಗಳನ್ನು ಪಡೆದುಕೊಂಡು ಮೊಳಕಾಲ್ಮೂರಿನಲ್ಲಿದ್ದ ಸೀತಾರಾಮ ಆಚಾರ್ಯರವರನ್ನು ಕರೆದುಕೊಂಡು ಊರಿಗೆ ಬಂದಿದ್ದರು.

ನಕಲಿ ನಾಣ್ಯ!
ಅಲ್ಲಿಂದ ಊರಿಗೆ ಬಂದ ಇಬ್ಬರು ಮಾರನೇ ದಿನ ಬೆಳಿಗ್ಗೆ ತಾವು ತಂದಿದ್ದ ಚಿನ್ನದ ನಾಣ್ಯಗಳನ್ನು ಸೀತಾರಾಮ ಆಚಾರ್ಯರವರ ಅಂಗಡಿಯಲ್ಲಿ ಪರೀಕ್ಷಿಸಿದಾಗ ಅವುಗಳು ನಕಲಿ ಎಂದು ತಿಳಿದಿದ್ದು ತಾವು ಮೋಸ ಹೋಗಿದ್ದರ ಬಗ್ಗೆ ಅರಿವಾಗಿದೆ. ತಕ್ಷಣ ಉದಯ್ ಅವರು ಆರೋಪಿ ಮಹೇಶನ ಮೊಬೈಲ್ ಗೆ ಕರೆ ಮಾಡಿ ‘ನೀನು ಕೊಟ್ಟ ನಾಣ್ಯಗಳು ನಕಲಿ ಚಿನ್ನವಾಗಿದ್ದು ನನ್ನ ಹಣವನ್ನು ವಾಪಾಸು ಕೊಡಿ’ ಎಂದು ಕೇಳಿದಾಗ ಆತನು ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದು ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ.

ದೂರು ದಾಖಲು..
ಆರೋಪಿ ಮಹೇಶನು ದೂರುದಾರ ಉದಯ್ ಅವರಿಗೆ ಮೋಸ ಮಾಡುವ ಉದ್ದೇಶದಿಂದ ನಂಬಿಸಿ ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 10 ಲಕ್ಷ ಹಣವನ್ನು ಪಡೆದುಕೊಂಡು ಮೋಸ ಮಾಡಿರುವುದಾಗಿ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ನೀಡಿದ ದೂರಿನಂತೆ 406, 417, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Comments are closed.