ಕರಾವಳಿ

ಮಂಗಳೂರಿನಲ್ಲಿ ಆಧುನಿಕ ತಾಂತ್ರಿಕತೆಯ ತೇಲಾಡುವ ಕಾಂಕ್ರೀಟ್ ಜೆಟ್ಟಿ ನಿರ್ಮಾಣದ ಯೋಜನೆ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು: ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಮಂಗಳೂರಿನ ಬಂದರಿನಲ್ಲಿ ಆಧುನಿಕ ತಾಂತ್ರಿಕತೆಯಲ್ಲಿ ತೇಲಾಡುವ ಕಾಂಕ್ರೀಟ್ ಜೆಟ್ಟಿ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ಮಂಗಳೂರು ನಗರ ದಕ್ಷಿಣದ ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದರು.

ಮಂಗಳೂರು ಮೀನುಗಾರಿಕಾ ಬಂದರು ಪ್ರದೇಶಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಇಂದಿನ ಆಧುನಿಕತೆಗೆ ಹೊಂದಿಕೊಳ್ಳುವಂತೆ ಸುಮಾರು 6.25 ಕೋಟಿ ವೆಚ್ಚದಲ್ಲಿ ತೇಲಾಡುವ ಕಾಂಕ್ರೀಟ್ ಜೆಟ್ಟಿ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇವೆ. ಮೀನುಗಾರರ ಹಿತದೃಷ್ಟಿಗೆ ಪೂರಕವಾಗಿರುವ ಈ ಜೆಟ್ಟಿಯು 60 ಮೀಟರ್ ಉದ್ದ ಹಾಗೂ 6 ಮೀಟರ್ ಅಗಲ 1 ಮೀಟರ್ ದಪ್ಪವಾಗಿದ್ದು ಸುಮಾರು 180 ಟನ್ ತೂಕವಿರುತ್ತದೆ. ಮಾತ್ರವಲ್ಲ, 360 ಟನ್ ಭಾರವನ್ನು ಸುಲಭವಾಗಿ ಹೊರುವ ಸಾಮರ್ಥ್ಯ ಇದಕ್ಕಿರುತ್ತದೆ ಎಂದು ಹೇಳಿದರು.

ಟೆಂಪೋಗಳು ಜೆಟ್ಟಿಯ ಮೂಲಕವೇ ಹಾದು ಮೀನುಗಾರಿಕಾ ಬೋಟ್’ಗಳಲ್ಲಿರುವ ಮೀನುಗಳನ್ನು ತುಂಬಿಸಿಕೊಂಡು ಹೋಗಬಹುದಾದಷ್ಟು ಶಕ್ತಿಯುತವಾಗಿರುತ್ತದೆ. ಮೀನುಗಾರಿಕಾ ಬೋಟುಗಳು ಜೆಟ್ಟಿಯನ್ನು ಸೇರುವ ಸಂಪರ್ಕ ಪ್ರದೇಶದ ಜೆಟ್ಟಿಯ ಸುತ್ತಲೂ ರಬ್ಬರಿನ ಪದರವನ್ನು ಅಳವಡಿಸಲಾಗುತ್ತಿದ್ದು ಬೋಟಿನ ಆವರಣಕ್ಕೆ ಹಾನಿಯಾಗದಂತೆ ತಡೆಗಟ್ಟಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಜೆಟ್ಟಿಯ ಒಳಗಡೆ ನೀರು, ವಿದ್ಯುತ್ ಸಂಪರ್ಕಗಳೂ ಕೂಡ ದೊರೆಯಲಿದೆ. ವಿಶೇಷವೆಂದರೆ, ನೀರಿನ ಮಟ್ಟದ ಅನುಗುಣವಾಗಿ ಜೆಟ್ಟಿಯು ತೇಲುತ್ತಿರುತ್ತದೆ. ಜೆಟ್ಟಿಯನ್ನು ಬೇರೆಡೆ ಸಿದ್ಧಪಡಿಸಿ ಸಮುದ್ರದ ಮೂಲಕವೇ ತಂದು ಜೋಡಿಸುವುದರಿಂದ ಕಾಮಗಾರಿಯ ಸಂದರ್ಭದಲ್ಲಿ ಮೀನುಗಾರರಿಗೆ ಯಾವುದೇ ರೀತಿಯ ಸಮಸ್ಯೆಯೂ ಉದ್ಭವವಾಗುವುದಿಲ್ಲ ಎಂದು ಹೇಳಿದ್ದಾರೆ.

ಈಗಾಗಲೇ ಯೋಜನೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು ಸರಕಾರದಿಂದ ಅನುಮೋದನೆ ದೊರೆತ ತಕ್ಷಣವೇ ಕಾಮಗಾರಿ ಪ್ರಾರಂಭವಾಗಲಿದೆ. ಆಧುನಿಕತೆಯತ್ತ ಜಗತ್ತು ಹೊರಳುತ್ತಿರುವಾಗ ನಮ್ಮ ಮಂಗಳೂರು ಅದಕ್ಕಿಂತ ಭಿನ್ನವಾಗಿರದೆ, ಸಾಂಸ್ಕೃತಿಕತೆಯನ್ನು ಉಳಿಸಿಕೊಂಡು ಆಧುನಿಕತೆಯತ್ತ ಹೆಜ್ಜೆ ಹಾಕಬೇಕು ಎನ್ನುವುದು ನಮ್ಮ ಗುರಿ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಈ ವೇಳೆ ಜೆಟ್ಟಿಯ ವಿನ್ಯಾಸಕಾರ ಮಿಲಿಂದರ್ ಪ್ರಭು, ಅಮುಲ್, ಮೀನುಗಾರರ ಮುಖಂಡರಾದ ನಿತಿನ್ ಕುಮಾರ್, ರಾಜೇಶ್ ಉಳ್ಳಾಲ್, ಮೋಹನ್ ಬೆಂಗ್ರೆ, ನಿತಿನ್ ಬಂಗೇರ, ಇಬ್ರಾಹಿಂ ಬೆಂಗ್ರೆ, ಸಂದೀಪ್ ಉಳ್ಳಾಲ್, ನವೀನ್, ಬಿಜೆಪಿ ಮುಖಂಡರಾದ ಸಂಜಯ್ ಪ್ರಭು, ಪ್ರೇಮಾನಂದ ಶೆಟ್ಟಿ, ದಿವಾಕರ್ ಪಾಂಡೇಶ್ವರ, ವಸಂತ್ ಜೆ ಪೂಜಾರಿ, ವಿನೋದ್ ಮೆಂಡನ್ ಸಹಿತ ಅನೇಕರು ಉಪಸ್ಥಿತರಿದ್ದರು.

Comments are closed.