ಕರಾವಳಿ

ಕರ್ನಾಟಕ ನೆರೆ ಪರಿಹಾರಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕರ್ಣಾಟಕ ಬ್ಯಾಂಕಿನಿಂದ ರೂ.50 ಲಕ್ಷಗಳ ದೇಣಿಗೆ 

Pinterest LinkedIn Tumblr

ಮಂಗಳೂರು : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರವರನ್ನು ವಿಧಾನಸೌಧ, ಬೆಂಗಳೂರಿನಲ್ಲಿ ಭೇಟಿ ಮಾಡಿದ ಕರ್ಣಾಟಕ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೀಫ್ ಎಕ್ಸಿಕ್ಯುಟಿವ್ ಆಫೀಸರ್ಮ ಹಾಬಲೇಶ್ವರ ಎಂ.ಎಸ್.ರವರು ಬ್ಯಾಂಕಿನ ವತಿಯಿಂದ ಕರ್ನಾಟಕ ನೆರೆ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. ೫೦ ಲಕ್ಷಗಳ ದೇಣಿಗೆಯನ್ನು ನೀಡಿದರು.

ಮಾನ್ಯ ಮುಖ್ಯಮಂತ್ರಿಗಳಿಗೆ ರೂ. 50ಲಕ್ಷಗಳ ದೇಣಿಗೆಯನ್ನು ಹಸ್ತಾಂತರಿಸಿದ  ಮಹಾಬಲೇಶ್ವರ ಎಂ.ಎಸ್. ಮಾತನಾಡಿ ‘ಕಳೆದ 118 ವರ್ಷಗಳಲ್ಲಿಯೇ ಕಂಡು ಕೇಳಿ ಅರಿಯದಂತಹ ಪ್ರಾಕೃತಿಕ ವಿಕೋಪ ಹಾಗೂ ನೆರೆ ಹಾವಳಿಗೆ ನಮ್ಮ ರಾಜ್ಯದ ಅನೇಕ ಭಾಗಗಳು ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ತತ್ತರಿಸಿ ಹೋಗಿವೆ.

ವರುಣನ ಆರ್ಭಟ ಹಾಗೂ ನೆರೆ ಹಾವಳಿಯ ಪರಿಣಾಮದಿಂದಾಗಿ ಜನರು ಮನೆ, ಮಠ, ಜಾನುವಾರು ಹಾಗೂ ಇನ್ನಿತರ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರ್ಗತಿಕರಾಗಿರುವುದು ನಮಗೆ ಅತೀವ ನೋವನ್ನುಂಟುಮಾಡಿದೆ. ಅಪಾರ ಜೀವಹಾನಿ ಹಾಗೂ ಆಸ್ತಿಪಾಸ್ತಿಗಳ ಹಾನಿಯನ್ನು ಮರಳಿ ತುಂಬಿಕೊಡಲು ಸಾಧ್ಯವಿಲ್ಲವಾದರೂ, ಸಂಕಟದ ಈ ಸಂದರ್ಭದಲ್ಲಿ ಛಲದಿಂದ ಪುಟಿದು ಮೇಲೆದ್ದು ಬದುಕನ್ನು ಮರಳಿ ಕಟ್ಟುವ ಅನಿವಾರ್ಯತೆ ಇದೆ. ನೋವಿನ ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ಈ ಮೊತ್ತವನ್ನು ದುರಂತಕ್ಕೀಡಾದ ಬದುಕನ್ನು ಮರಳಿ ಕಟ್ಟುವ ಪ್ರಕ್ರಿಯೆಗೆ ಸಮರ್ಪಿಸುತ್ತಿದೆ.

ಸಾರ್ವಜನಿಕ ಜೀವನದ ಎಲ್ಲಾ ಆಯಾಮಗಳಲ್ಲೂ ತನ್ನ ಸೇವೆಯನ್ನು ನೀಡುತ್ತಾ ಬಂದಿರುವ ಬ್ಯಾಂಕು ಈ ಸಂದರ್ಭದಲ್ಲೂ ಸಂತ್ರಸ್ತರ ನೋವಿಗೆ ಸ್ಪಂದಿಸಿದೆ. ಸಂಕಟದ ಕ್ಷಣಗಳಲ್ಲಿ ನಾವೆಲ್ಲಾ ಒಂದು ಎನ್ನುವ ಅಭಿಮಾನವನ್ನು ತೋರಿದೆ. ಈ ನಾಡಿನ ಮರುನಿರ್ಮಾಣದಲ್ಲಿ ರಾಜ್ಯ ಸರ್ಕಾರ ಹಾಗೂ ಅನೇಕ ಸಂಘ ಸಂಸ್ಥೆಗಳು ಭಾಗಿಯಾಗಿರುವುದು ಶ್ಲಾಘನೀಯ ಕಾರ್ಯ. ನಾವೆಲ್ಲಾ ಒಂದಾಗಿ ಮರುನಿರ್ಮಾಣ ಕಾರ್ಯಕ್ಕೆ ಹೆಗಲು ಕೊಡೋಣ ಹಾಗೂ ನೊಂದ ಜೀವಿಗಳ ಕಂಬನಿ ತೊಡೆಯೋಣ’ ಎಂದು ನುಡಿದರು.

ಕರ್ಣಾಟಕ ಬ್ಯಾಂಕಿನ ಉದಾರ ದೇಣಿಗೆಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ರಾಜ್ಯದ  ಮುಖ್ಯಮಂತ್ರಿಗಳಾದ  ಯಡಿಯೂರಪ್ಪ ನವರು ಬ್ಯಾಂಕಿನ ಸಾಮಾಜಿಕ ಕಳಕಳಿಯ ಬಗ್ಗೆ ಶ್ಲಾಘನೆಯ ಮಾತುಗಳನ್ನಾಡಿ ಬ್ಯಾಂಕಿನ ಏಳ್ಗೆಗಾಗಿ ಹಾರೈಸಿದರು

ಸಮಾರಂಭದಲ್ಲಿ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ಸರ್ಕಾರ ಮತ್ತು ಬ್ಯಾಂಕಿನ ಬೆಂಗಳೂರು ಪ್ರಾದೇಶಿಕ ಕಚೇರಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಆದ  ಬಿ ಎಸ್. ರಾಜಾ ಉಪಸ್ಥಿತರಿದ್ದರು.

Comments are closed.