ಕರಾವಳಿ

ಸಿಸಿಬಿ ಕಾರ್ಯಚರಣೆ – ಕುಖ್ಯಾತ ರೌಡಿ ಕಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸೆರೆ

Pinterest LinkedIn Tumblr

ಮಂಗಳೂರು ; ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕೋಟೆಕಾರು ಪೆಟ್ರೋಲ್ ಪಂಪ್ ಬಳಿಯಲ್ಲಿ ಫೆಬ್ರವರಿಯಲ್ಲಿ ನಡೆದ ಕುಖ್ಯಾತ ರೌಡಿ ಕಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ನೂರ್ ಅಲಿ, ರಶೀದ್ ಟಿ.ಎಸ್. ಹುಸೈನಬ್ಬ ಯಾನೆ ಹುಸೈನ್, ಮುತಾಸಿಂ ಯಾನೆ ತಸ್ಲಿಂ ಸಹಿತ ಹಲವರನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕೇರಳದ ಕಾಸರಗೋಡು ಚಳಯಂಗೋಡ್ ಮೇಲ್ಪರಂಬ ನಿವಾಸಿ ಮೊಹಮ್ಮದ್ ನಜೀಬ್ @ ಕಲ್ಲಟ್ರ ನಜೀಬ್ (46) ಎಂಬಾತನನ್ನು ನಿನ್ನೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

2017ರ ಫೆ. 14ರಂದು ಮುಹಮ್ಮದ್ ಝಾಹಿದ್ ಎಂಬವರು ತನ್ನ ಸ್ನೇಹಿತ ಕಾಲಿಯಾ ರಫೀಕ್‌ನೊಂದಿಗೆ ಮುಜಿಬ್ ಹಾಗೂ ಫಿರೋಝ್ ಜೊತೆಯಲ್ಲಿ ತಡರಾತ್ರಿ 11:30ಕ್ಕೆ ಕಾರಿನಲ್ಲಿ ಹೊಸಂಗಡಿಯಿಂದ ಮಂಗಳೂರು ಕೋಟೆಕಾರು ಪೆಟ್ರೋಲ್ ಬಂಪ್ ತಲುಪಿದರು.
ಈ ವೇಳೆ ಆರೋಪಿಗಳ ಪೈಕಿ ಚಾಲಕ ರಶೀದ್ ಹೊಂಚು ಹಾಕಿದಂತೆ ಪೆಟ್ರೋಲ್ ಬಂಕ್ ಬಳಿ ಟಿಪ್ಪರ್ ಲಾರಿ ನಿಲ್ಲಿಸಿದ್ದನು. ಕಾಲಿಯಾ ರಫೀಕ್ ಇದ್ದ ಕಾರು ಎದುರು ಬರುತ್ತಿದ್ದಂತೆ ಆರೋಪಿ ಏಕಾಏಕಿ ಟಿಪ್ಪರ್‌ನ್ನು ಢಿಕ್ಕಿ ಹೊಡೆಸಿದ್ದಾನೆ. ಕಾರನ್ನು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿದ್ದಾನೆ.

ಏತನ್ಮಧ್ಯೆ, ಆರೋಪಿಗಳ ತಂಡದ ಮತ್ತೊಂದು ಕಾರು ಕಾಲಿಯಾ ರಫೀಕ್‌ನನ್ನು ಬೆನ್ನತ್ತಿಕೊಂಡು ಬಂದಿದೆ. ದುಷ್ಕರ್ಮಿಗಳ ಕೈಯಲ್ಲಿ ಸಿಕ್ಕಿಬೀಳುವುದು ಖಾತರಿಯಾಗುತ್ತಿದ್ದಂತೆ ಕಾಲಿಯಾ ರಫೀಕ್ ಮತ್ತು ಸಹಚರರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಸಮಯ ಆರೋಪಿಗಳ ಪೈಕಿ ನೂರ್ ಅಲಿ ಹಾಗೂ ಇನ್ನೋರ್ವ ಪಿಸ್ತೂಲ್‌ನಿಂದ ಕಾಲಿಯಾ ರಫೀಕ್‌ ಮೇಲೆ ಗುಂಡು ಹಾರಿಸಿದ್ದಾರೆ. ಅಲ್ಲದೆ, ಇತರ ಆರೋಪಿಗಳು ಬೆನ್ನಟ್ಟಿ ತಲವಾರಿನಿಂದ ಕಡಿದು ಕೊಲೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದ ಮಂಗಳೂರು ಪೊಲೀಸರು ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ಘಟನೆ ನಡೆದ ಸಮಯ ಮೃತ ಕಾಲಿಯಾ ರಫೀಕ್ ಇದ್ದ ಕಾರು ಚಾಲಕ ಮುಹಮ್ಮದ್ ನಜೀಬ್ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದನು ಎಂದು ಆರೋಪಿಸಲಾಗಿತ್ತು. ಕೃತ್ಯದ ನಂತರ ಈತ ತಲೆಮರೆಸಿಕೊಂಡು ಮುಂಬೈ, ಬೆಂಗಳೂರು, ಎರ್ನಾಕುಳಂ ದೇಶದ ವಿವಿಧೆಡೆ ತಿರುಗಾಡುತ್ತಿದ್ದನು. ಈತನ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕೇರಳದಲ್ಲಿ ಗುರುವಾರ ಬಂಧಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಆರೋಪಿ ಮುಹಮ್ಮದ್ ನಜೀಬ್ ಪ್ರಕರಣದ ಪ್ರಮುಖ ಆರೋಪಿ ಝೀಯಾ ಹಾಗೂ ಇತರರೊಂದಿಗೆ ಸೇರಿಕೊಂಡು ಸಂಚು ರೂಪಿಸಿ ಕೊಲೆ ಕೃತ್ಯ ನಡೆಸಿರುವುದಾಗಿ ಆರೋಪಿಸಲಾಗಿದೆ. ಆರೋಪಿ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು, ಬೇಕಲ, ನೀಲೇಶ್ವರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ, ವಂಚನೆ ಪ್ರಕರಣಗಳು ಹೀಗೆ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ.

ಮಂಗಳೂರು ನಗರದ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕೆ, ಪಿಎಸ್ಸೈ ಕಬ್ಬಾಳ್‌ರಾಜ್ ಎಚ್.ಡಿ. ಹಾಗೂ ಸಿಸಿಬಿ ಸಿಬ್ಬಂದಿ ಭಾಗವಹಿಸಿದ್ದರು.

 

Comments are closed.