ಕರಾವಳಿ

ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ಚಿಂತನೆ : ಮಂಗಳೂರಿನಲ್ಲಿ ಸಚಿವ ಸಿ.ಟಿ.ರವಿ

Pinterest LinkedIn Tumblr

ಮಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡುವ ಮೂಲಕ ಅಲ್ಲಿನ ಪ್ರವಾಸಿ ತಾಣಗಳ ಸಮಗ್ರ ಮಾಹಿತಿ ಪೆಡೆದು ನವೆಂಬರ್ ಅಂತ್ಯದೊಳಗೆ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸುವ ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಖಾತೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನೀಗ ಎಲ್ಲಾ ಜಿಲ್ಲೆಗಳಿಗೂ ಅಧ್ಯಯನಕ್ಕಾಗಿ ತೆರಳುತ್ತಿದ್ದೇನೆ. ಈಗಾಗಲೆ 11 ಜಿಲ್ಲೆಗೆ ಭೇಟಿ ನೀಡಿಯಾಗಿದೆ. ಶೀಘ್ರದಲ್ಲಿಯೇ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗವುದು ಎಂದರು.

ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ಪ್ರವಾಸಿ ಕೇಂದ್ರಗಳ ಸೃಷ್ಟಿಗಿಂತಲೂ ಪ್ರಸ್ತುತ ಇರುವ ಕೇಂದ್ರಗಳಿಗೆ ಜೀವ ನೀಡಬೇಕಿದೆ. ಅದಕ್ಕಾಗಿ ಖಾಸಗಿ ಸಂಸ್ಥೆಗಳ ಸಹಕಾರ ಪಡೆಯಲಾಗುವುದು. ದ.ಕ. ಜಿಲ್ಲೆಯಲ್ಲಿ ದೇವಸ್ಥಾನ, ಕ್ರೀಡೆ, ಶೈಕ್ಷಣಿಕ ಪ್ರವಾಸೋದ್ಯಮ ಅಭಿವೃದ್ಧಿಯಾಗಿದೆ. ಆದರೆ ಸಾಂಸ್ಕೃತಿಕ ಸೊಗಡುಗಳಾದ ಕಂಬಳ, ಯಕ್ಷಗಾನಗಳ ಅಧ್ಯಯನ ಮಾಡುವ ಸಲುವಾಗಿಯೇ ಪ್ರವಾಸಿಗರನ್ನು ಸೆಳೆಯುವ ಅಗತ್ಯವಿದೆ ಎಂದು ಸಿಟಿ ರವಿ ಹೇಳಿದರು.

 ಸಾಮಾಜಿಕ ಜಾಲತಾಣಗಳು ಹೆಚ್ಚು ಸಕ್ರಿಯ :

ಮುದ್ರಣ, ದೃಶ್ಯ, ಶ್ರಾವ್ಯ ಮಾಧ್ಯಮಗಳಿಗಿಂತ ಸಾಮಾಜಿಕ ಜಾಲತಾಣಗಳು ಇಂದು ಹೆಚ್ಚು ಸಕ್ರಿಯವಾಗುತ್ತಿರುವ ಮತ್ತು ಕ್ಷಣಾರ್ಧದಲ್ಲಿ ಜನಸಾಮಾನ್ಯರಿಗೆ ತಲುಪುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ವೃದ್ಧಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದವರು ಹೇಳಿದರು.

ಜನಸಾಮಾನ್ಯರು ತಮ್ಮ ಊರಿನ ಪ್ರವಾಸಿ ಸ್ಥಳಗಳನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಮಾಡಬಹುದು. ಕೆಲವು ಹಳ್ಳಿಗಳಲ್ಲಿ ಪ್ರವಾಸಿ ಕೇಂದ್ರಗಳಿವೆ. ಅದು ಆಯಾ ಊರಿನವರಿಗೆ ಮುಖ್ಯವಲ್ಲದಿದ್ದರೂ ಕೂಡ ಪ್ರವಾಸಿಗರಿಗೆ ಮುಖ್ಯವಾಗಿರುತ್ತದೆ. ಅದನ್ನು ಮನಗಂಡು ಸ್ಥಳೀಯರು ಈ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು. ಇಲಾಖಾಧಿಕಾರಿಗಳು ಕೂಡ ಮುತುವರ್ಜಿ ವಹಿಸಬೇಕಿದೆ ಎಂದು ಸಿ.ಟಿ.ರವಿ ಹೇಳಿದರು.

14 ಜಿಲ್ಲೆಗಳಲ್ಲಿ ರಂಗಮಂದಿರವಿಲ್ಲ :

ರಾಜ್ಯದ 14ಜಿಲ್ಲೆಗಳಲ್ಲಿ ರಂಗಮಂದಿರವಿಲ್ಲ. ಘಟಾನುಘಟಿಗಳೇ ಇರುವ ದ.ಕ.ಜಿಲ್ಲೆಯಲ್ಲಿ ಈವರೆಗೆ ರಂಗಮಂದಿರವಿಲ್ಲದ್ದು ಬೇಸರದ ವಿಚಾರ. ಈಗಾಗಲೇ ರಂಗಮಂದಿರಕ್ಕೆ ಜಮೀನು ನೀಡಲಾಗಿದೆ. ಅನುದಾನವೂ ಬಿಡುಗಡೆಯಾಗಿದೆ. ಕೆಲವು ಕಾರಣದಿಂದ ರಂಗ ಮಂದಿರ ನಿರ್ಮಾಣ ಆಗಿಲ್ಲ. ಶೀಘ್ರ ಮುಖ್ಯಮಂತ್ರಿಯ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೆಲವು ಸಂಘ-ಸಂಸ್ಥೆಗಳು, ಕಲಾವಿದರು ಅನುದಾನ ದುರ್ಬಳಕೆ ಮಾಡುವ ಬಗ್ಗೆ ಮಾಹಿತಿ ಬಂದಿವೆ. ಕಲಾವಿದರಿಗೆ ಪ್ರೋತ್ಸಾಹ ನೀಡಲು ಇಲಾಖೆ ಬದ್ಧವಾಗಿದೆ. ಆದರೆ ಕೆಲವು ಸಂಸ್ಥೆಗಳು ಸರಕಾರಿ ಹಣ ಪಡೆಯಲು ಬೇರೆಯೇ ದಾರಿ ಕಂಡುಕೊಂಡಿವೆ. ಅದನ್ನು ಪತ್ತೆ ಹಚ್ಚಿ ತಡೆ ಹಾಕಲಾಗುವುದು ಎಂದು ಸಿಟಿ ರವಿ ಹೇಳಿದರು.

ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ ಅಥಿತಿಗಳಾಗಿದ್ದರು, ಮಂಗಳೂರು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕೆ.ಆನಂದ ಶೆಟ್ಟಿ, ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್,ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments are closed.