ಕರಾವಳಿ

ಜಯಂತಿಗಳ ಆಚರಣೆಯ ಸ್ವರೂಪದಲ್ಲಿ ಬದಲಾವಣೆ ಮಾಡುವ ಅಗತ್ಯವಿದೆ : ಸಚಿವ ಸಿ.ಟಿ. ರವಿ

Pinterest LinkedIn Tumblr

ಮಂಗಳೂರು : ರಾಜ್ಯ ಸರಕಾರದಿಂದ ನಡೆಸಲಾಗುತ್ತಿರುವ ಜಯಂತಿಗಳ ಆಚರಣೆಯ ಸ್ವರೂಪದಲ್ಲಿ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸಿ.ಟಿ. ರವಿ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ನಡೆದ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 28 ಜಯಂತಿಗಳ ಆಚರಣೆ ಮಾಡಲಾಗುತ್ತಿದೆ. ಆದರೆ ಆಚರಣೆಗಳು ಕೇವಲ ಜಾತಿಗಳಿಗೆ ಮಾತ್ರ ಸೀಮಿತಗೊಳ್ಳುತ್ತಿದೆ, ಜನಾಕರ್ಷಣೆಯಾಗಿ ಆಚರಣೆಯಾಗುತ್ತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಚಿಂತಕರು, ಸಾಹಿತಿಗಳು, ಸ್ಥಳೀಯ ಜನಪ್ರತಿನಿಧಿಗಳ ಸಭೆ ನಡೆಸಿ ಮಾಹಿತಿಯನ್ನು ಕ್ರೋಢೀಕರಿಸಿ ವರದಿಯನ್ನು ನೀಡಬೇಕು. ಎಲ್ಲಾ ಜಿಲ್ಲೆಗಳ ವರದಿಯ ಆಧಾರದಲ್ಲಿ ರಾಜ್ಯ ಮಟ್ಟದಲ್ಲಿ ಚಿಂತನಾ ಸಭೆ ನಡೆಸಿ ಬಳಿಕ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ 2016 ನೇ ಸಾಲಿನಿಂದ ಮಂಜೂರಾದ ಸಾಕಷ್ಟು ಯಾತ್ರಿನಿವಾಸಗಳು ಕೆಆರ್‍ಐಡಿಎಲ್‍ನಿಂದ ಇನ್ನೂ ಪೂರ್ಣಗೊಳ್ಳದಿರು ವುದು, ವಿವಿಧ ಹಂತಗಳಲ್ಲಿ ಅರ್ಧಕ್ಕೇ ನಿಂತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ದಕ್ಷಿಣ ಕನ್ನಡದಲ್ಲಿ ಈ ರೀತಿಯ ಕಾಮಗಾರಿಯ ಬಗ್ಗೆ ನಿರೀಕ್ಷೆ ಇರಲಿಲ್ಲ ಎಂದರು.

ಹಣ ಮಂಜೂರಾಗಿದ್ದರೂ ಬಳಕೆಯಾಗದೆ, ಕಾಮಗಾರಿ ನಡೆಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಒಂದು ತಿಂಗಳ ಗಡುವು ನೀಡಿ ಸ್ಥಳೀಯಾಡಳಿತದಿಂದ ನಿರ್ವಹಣೆಗೆ ಒಪ್ಪಿಗೆ ದೊರಕಿದಲ್ಲಿ, ಸ್ಥಳವನ್ನು ಇಲಾಖೆಗೆ ಹಸ್ತಾಂತರ ಮಾಡಲು ಒಪ್ಪಿಕೊಂಡಲ್ಲಿ ಮಾತ್ರವೇ ಅನುದಾನ ಮಂಜೂರು ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಈ ಯಾತ್ರಿ ನಿವಾಸ ನಿರ್ಮಾಣಕ್ಕೆ ಸರಕಾರದಿಂದ ಹಣ ಬಿಡುಗಡೆಯಾಗುತ್ತದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ನೀಡಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರನ್ನು ಸೇರಿಸಿ ಸಭೆ ನಡೆಸಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳ ತಂಡ ರಚನೆ ಮಾಡಿ ಅವರಿಂದ ಗ್ರಾಮ ಮಾಹಿತಿ ಸಂಗ್ರಹಿಸಿ, ಗ್ರಾಮ ಇತಿಹಾಸದ ವರದಿ ತಯಾರಿಸಿ ಸಮಗ್ರ ಮಾಹಿತಿ ಕಲೆ ಹಾಕಿ ಎಂದು ಸಚಿವರು ಹೇಳಿದರು.

ಕರ್ನಾಟಕ ಶಾಲಾ ಪ್ರವಾಸ ಸಂಧರ್ಭದಲ್ಲಿ ಗಾಂಧೀಜಿಯವರ 150 ನೇ ಜನ್ಮದಿನಾಚರಣೆಯ ಪ್ರಯುಕ್ತ ಮಕ್ಕಳಿಗೆ ಪ್ರವಾಸದ ಜೊತೆಗೆ ಗಾಂಧೀ ವಿಚಾರಧಾರೆಯನ್ನು ಜೀವನದುದ್ದಕ್ಕೂ ಅಳವಡಿಸುವುದಾಗಿ ಸಂಕಲ್ಪ ಮಾಡಿಸಿ. ಕರವಾಳಿ ಕಲೆಯಾದ ಕಂಬಳ, ಯಕ್ಷಗಾನ ಹಾಗೂ ತಾಲೀಮು ಮಂತಾದವುಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜನ ಮಾಡಲು ಕಲಾವಿದರೊಂದಿಗೆ ಸಭೆ ನಡೆಸಿ ಮಾಹಿತಿ ನೀಡಿ ಎಂದರು.

ಸಭೆಯಲ್ಲಿ ಶಾಸಕರಾದ ರಾಜೇಶ್ ನಾಯ್ಕ, ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧು ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ ಉಪಸ್ಥಿತರಿದ್ದರು.

Comments are closed.