ಕರಾವಳಿ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ : ಶಾರದ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠೆಯೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್. 29: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವರ್ಷಾಂಪ್ರತಿ ನಡೆಯುವ ನವರಾತ್ರಿ ಉತ್ಸಾವ ಹಾಗೂ ವೈಭವದ ಮಂಗಳೂರು ದಸರಾ ಮಹೋತ್ಸವಕ್ಕೆ ಬಾನುವಾರ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಪ್ರತೀವರ್ಷ ಮಂಗಳೂರು ದಸರಾವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ದಸರಾ ಸುಗಮವಾಗಿ ಸಾಗಲು ಜಿಲ್ಲಾಡಳಿತದ ವತಿಯಿಂದ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. ನವರಾತ್ರಿ ದಸರಾ ಉತ್ಸವವು ನಾಡಿನ ಮತ್ತು ಜಿಲ್ಲೆಯ ಜನತೆಗೆ ಸುಖ ಶಾಂತಿ ನೆಮ್ಮದಿ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.

ಪ್ರತಿಷ್ಟಾಪನೆಯ ಶಾರದಾ ವಿಗ್ರಹವನ್ನು ಮೆರವಣಿಗೆಯಲ್ಲಿ ಭವ್ಯವಾಗಿ ಬ್ಯಾಂಡ್‌ಗಳು ಮತ್ತು ಹುಲಿ ವೇಷಾ ಮೆರವಣಿಗೆಯಲ್ಲಿ ಮುನ್ನಡೆಸಿದರು. ವಿವಿಧ ಆಚರಣೆಗಳನ್ನು ನಡೆಸಿ ಶಾರದ ವಿಗ್ರಹವನ್ನು ಸ್ಥಾಪಿಸಲಾಯಿತು.

ಇಂದು ಬೆಳಗ್ಗೆ ಕ್ಷೇತ್ರದಲ್ಲಿ ಗುರು ಪ್ರಾಥನೆ, ಪುಣ್ಯ ಹೋಮ, ನವಕಲಶಾಭಿಷೇಕ ಕಲಶಪ್ರತಿಷ್ಠೆ ಯೊಂದಿಗೆ ಶ್ರೀ ಗಣೇಶ, ಶಾರದಾ ಮಾತೆಯೊಂದಿಗೆ ನವದುರ್ಗೆಯರಾದ ಕಾತ್ಯಾಯಿನಿ, ಸ್ಕಂದ ಮಾತಾ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮ ಚಾರಿಣಿ, ಚಂದ್ರಘಟ, ಕೂಷ್ಮಾಂಡಾ, ಸಿದ್ಧಿದಾತ್ರಿ, ಮಹಾಗೌರಿ, ಮಹಾಕಾಳಿಯರ ವಿಗ್ರಹಗಳ ಪ್ರತಿಷ್ಠಾಪನೆಯೊಂದಿಗೆ ನವರಾತ್ರಿ ಉತ್ಸವಕ್ಕೆ ಕುದ್ರೋಳಿಯಲ್ಲಿ ಚಾಲನೆ ನೀಡಲಾಯಿತು. ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಇಂದಿನಿಂದ ಅ.9ರವರೆಗೆ ನವರಾತ್ರಿ ಉತ್ಸಾವ ಹಾಗೂ ವೈಭವದ ಮಂಗಳೂರು ದಸರಾ ಮಹೋತ್ಸವ ಜರಗಲಿದೆ.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್. ಆರ್ (ಎಡ್ವಕೇಟ್), ಶ್ರೀಕ್ಷೇತ್ರಾಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಉರ್ಮಿಳಾ ರಮೇಶ್, ದೇವೇಂದ್ರ ಪುಜಾರಿ,ರಾಧಾ ಕೃಷ್ಣ , ಬಿ.ಕೆ.ತಾರಾನಾಥ್, ರವಿಶಂಕರ್ ಮಿಜಾರ್, ಮಾಲತಿ ಜನಾರ್ದನ ಪುಜಾರಿ, ಡಾ.ಬಿ.ಜಿ.ಸುವರ್ಣ, ಕೆ.ಮಹೇಶ್ಚಂದ್ರ, ಮತ್ತಿತ್ತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸೆ.30ರಂದು ದುರ್ಗಾ ಹೋಮ, ಅ.1ರಂದು ಬೆಳಗ್ಗೆ ಆರ್ಯ ದುರ್ಗಾ ಹೋಮ, ಅ.2ರಂದು ಭಗವತೀ ದುರ್ಗಾ ಹೋಮ, ಅ.3ರಂದು ಕುಮಾರಿ ದುರ್ಗಾ ಹೋಮ, ಅ.4ರಂದು ಅಂಬಿಕಾ ದುರ್ಗಾಹೋಮ, ಅ.5ರಂದು ಮಹಿಷಮರ್ದಿನಿ ದುರ್ಗಾಹೋಮ, ಅ.6ರಂದು ಚಂಡಿಕಾಹೋಮ, ಹಗಲೋತ್ಸವ, ಅ.7ರಂದು ಸರಸ್ವತಿ ದುರ್ಗಾಹೋಮ, ಶತಸೀಯಾಳಾಭಿಷೇಕ, ಅ.8ರಂದು ವಾಗೀಶ್ವರಿ ದುರ್ಗಾಹೋಮ ನಡೆಯಲಿದೆ. ದಸರಾ ಮಹೋತ್ಸವ ಅಂಗವಾಗಿ ರಾಜ್ಯ, ರಾಷ್ಟ್ರಮಟ್ಟದ ನಾನಾ ಕಲಾ ತಂಡಗಳಿಂದ ಕಲಾಪ್ರದರ್ಶನ ನಡೆಯಲಿದೆ.

ಅ.8ರಂದು ಸಂಜೆ 4.00ರಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ಧನ ಪೂಜಾರಿಯವರ ನೇತ್ರತ್ವದಲ್ಲಿ ಮಂಗಳೂರು ದಸರಾ ಮಹೋತ್ಸವ ಭವ್ಯ ಶೋಭಾಯಾತ್ರೆ ನಡೆಯಲಿದೆ.

ಶ್ರೀ ಕ್ಷೇತ್ರದಿಂದ ಹೊರಟ ಶೋಭಾಯಾತ್ರೆಯು ಕಂಬ್ಳಾ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್‌ಭಾಗ್, ಬಲ್ಲಾಳ್‌ ಬಾಗ್, ಪಿವಿ‌ಎಸ್, ನವಭಾರತ್ ಸರ್ಕಲ್, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್, ಚಿತ್ರಾ ಟಾಕೀಸು, ಅಳಕೆಯಾಗಿ ಶ್ರೀ ಕ್ಷೇತ್ರಕ್ಕೆ ಬರಲಿದೆ.

ಅ.9ರಂದು ಬೆಳಗ್ಗೆ 4ಗಂಟೆಗೆ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ ನಡೆದು ಶ್ರೀ ಶಾರದ ವಿಸರ್ಜನೆ, ಅವಭೃತ ಸ್ನಾನ ನಡೆಯಲಿದೆ. ಸಂಜೆ 7ರಿಂದ ಭಜನಾ ಕಾರ್ಯಕ್ರಮ, 8.೦೦ಕ್ಕೆ ಗುರುಪೂಜೆ ನಡೆಯಲಿದೆ.

Comments are closed.