ಕರಾವಳಿ

ಫೋರಂ ಫಿಝಾ ಮಾಲ್‌ ಹಲ್ಲೆ ಪ್ರಕರಣ : ಮತ್ತಿಬ್ಬರ ಬಂಧನ – ನಗರದ ಎಲ್ಲಾ ಮಾಲ್‍ಗಳಿಗೆ ಪೊಲೀಸ್ ಬಿಗಿ ಭದ್ರತೆ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್. 26 ನಗರದ ಪಾಂಡೇಶ್ವರ ಸಮೀಪದ ಫೋರಂ ಫಿಝಾ ಮಾಲ್‌ನಲ್ಲಿ ಬುಧವಾರ ಮಧ್ಯಾಹ್ನ ಯುವಕನಿಗೆ ತಂಡವೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಾಪರಾಧಿ ಸಹಿತಾ ಮೂವರನ್ನು ಬಂಧಿಸಿರುವ ಪಾಂಡೇಶ್ವರ ಠಾಣಾ ಪೊಲೀಸರು ಇದೀಗ ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದಂತಾಗಿದೆ.

ಪಾಂಡೇಶ್ವರ ಫೋರಂ ಫಿಝಾ ಮಾಲ್‌ನಲ್ಲಿ ಬುಧವಾರ ಮಧ್ಯಾಹ್ನ ಯುವತಿಯರನ್ನು ಚುಡಾಯಿಸುತ್ತಿದ್ದ ಮುಸ್ಲಿಂ ಯುವಕರ ತಂಡವೊಂದಕ್ಕೆ ಬುದ್ಧಿ ಹೇಳಿ “ಇದು ಹಿಂದೂ ರಾಷ್ಟ್ರ’ ಎಂದು ವಾದಿಸಿದ ಯುವಕನೊಬ್ಬನಿಗೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ನಡೆಸಿದ್ದು, ಈ ಘಟನೆಯ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಮೂಲಕ ವೈರಲ್ ಆಗಿತ್ತು.

ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸಮೀಪದ ಮಂಜುನಾಥ್ ಹಲ್ಲೆಗೊಳಗಾದ ಯುವಕನಾಗಿದ್ದು, ಆತ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಪೊಲೀಸರು ಕೂಡಲೇ ಮುಹಿಯುದ್ದೀನ್ ಸಫ್ವಾನ್, ಅಬ್ದುಲ್ ರಹೀಂ ಸಾದ್ ಹಾಗೂ ಇನ್ನೋರ್ವ ಬಾಲಾಪರಾಧಿಯನ್ನು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಡಾ. ಹರ್ಷ ಅವರು ಬುಧವಾರ ತಿಳಿಸಿದ್ದರು.

ಇದೀಗ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 5 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ. ಹರ್ಷ ತಿಳಿಸಿದ್ದಾರೆ. ಅಬ್ದುಲ್ ರಹೀಂ ಶಾ ಮತ್ತು ಮಹಮ್ಮದ್ ಮರ್ಝಾಕ್ ಫರಾನ್‌ನನ್ನು ಇಂದು ಬಂಧಿಸಲಾಗಿದ್ದು, ಇವರಿಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಶಾಮೀಲಾಗಿರುವವರ ಇನ್ನು ಕೆಲವರ ಬಂಧನಕ್ಕೆ ಬಲೆ ಬೀಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದವರು ತಿಳಿಸಿದ್ದಾರೆ. ಇದಲ್ಲದೆ ನಗರದ ಎಲ್ಲಾ ಮಾಲ್ ಗಳಿಗೆ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಮಂಗಳೂರು ನಗರದ ಸಾರ್ವಜಿನಿಕರ ಹಿತದೃಷ್ಟಿಯಿಂದ ನಗರದೆಲ್ಲೆಡೆ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿದೆ. ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಹಿನ್ನೆಲೆ ಭದ್ರತೆ ಏರ್ಪಡಿಸಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ..

Comments are closed.