ಕರಾವಳಿ

ಉಳ್ಳಾಲ ಶೂಟೌಟ್ ಪ್ರಕರಣ : 14 ಮಂದಿಯ ಸೆರೆ – ಘಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ ಗಾಯ

Pinterest LinkedIn Tumblr

ಮಂಗಳೂರು / ಉಳ್ಳಾಲ : ಉಳ್ಳಾಲ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಸಮೀಪದ ಕಡಪರ ಎಂಬಲ್ಲಿ ರವಿವಾರ ತಡರಾತ್ರಿ ಎರಡು ತಂಡಗಳ ನಡುವಿನ ಹೊಡೆದಾಟ, ದೊಂಬಿ ಹಾಗೂ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 14 ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಉಳ್ಳಾಲದ ಮುಕ್ಕಚ್ಚೇರಿ ಸಮೀಪ ರವಿವಾರ ತಡರಾತ್ರಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು ಈ ಘಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಹಾಗೂ ಕಡಪರ ನಿವಾಸಿ ಇರ್ಶಾದ್ ಎಂಬವರು ಗಾಯಗೊಂಡಿದ್ದರು.

ವಾಟ್ಸ್‌ಆಯಪ್‌ನಲ್ಲಿ ಹರಡಿದ ಸಂದೇಶದ ವಿಚಾರವಾಗಿ ಸುಹೈಲ್ ಕಂದಕ್ ಮತ್ತು ಕಡಪರ ನಿವಾಸಿ ಸಲ್ಮಾನ್ ಎಂಬವರ ತಂಡಗಳ ನಡುವೆ ಈ ಹೊಡೆದಾಟ ನಡೆದಿದ್ದು, ಈ ಮಾರಾಮಾರಿಯಲ್ಲಿ ಶೂಟೌಟ್ ಕೂಡಾ ನಡೆದಿದೆ.

ಆರಂಭದಲ್ಲಿ ವಾಟ್ಸ್‌ಆಯಪ್ ಸಂದೇಶದ ವಿಚಾರವಾಗಿ ಸುಹೈಲ್ ಕಂದಕ್ ಮತ್ತು ಸಲ್ಮಾನ್ ನಡುವೆ ಮೊಬೈಲ್ ಫೋನ್ ಮೂಲಕ ಮಾತಿನ ಚಕಮಕಿ ನಡೆದಿದೆ. ಇದು ತಾರಕಕ್ಕೇರಿದ್ದು, ಅತ್ತಾವರ ನಿವಾಸಿಯಾಗಿರುವ ಸುಹೈಲ್ ಕಂದಕ್ ಮತ್ತು ತಂಡ ರಾತ್ರಿ ಕಡಪರಕ್ಕೆ ತೆರಳಿದ್ದು, ಅಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ ನಡೆದಿದೆ.

ಸುಹೈಲ್ ಕಂದಕ್, ಬಶೀರ್ ಮತ್ತು ಇತರರ ಆರು ಮಂದಿಯ ಗುಂಪು ಮುಕ್ಕಚ್ಚೇರಿಗೆ ರವಿವಾರ ತಡರಾತ್ರಿ 11:45ರ ಸುಮಾರಿಗೆ ತೆರಳಿ ಸಲ್ಮಾನ್ ಎಂಬಾತನ್ನು ವಿಚಾರಿದ್ದಾರೆ. ಅಲ್ಲೇ ಇದ್ದ ಇನ್ನೊಂದು ತಂಡದ ಜತೆ ಮಾತುಕತೆ ನಡೆದು ಅದು ಅತಿರೇಕಕ್ಕೆ ತಿರುಗಿ ಸುಹೈಲ್ ಕಂದಕ್ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ.

ಆ ಗುಂಡು ಇರ್ಶಾದ್ ಎಂಬಾತನ ಬಲಕಾಲಿನ ಮಂಡಿ ಚಿಪ್ಪಿನ ಕೆಳಗೆ ಪ್ರವೇಶಿಸಿದೆ. ಈ ಸಂದರ್ಭ ಇನ್ನೊಂದು ಗುಂಪು ಹಲ್ಲೆ ನಡೆಸಿದೆ. ಇದೇ ಸಂದರ್ಭ ಕಾರೊಂದನ್ನು ವಾಹನ ಹಾನಿಗೈಯಲಾಗಿದೆ. ಪ್ರಕರಣದಲ್ಲಿ ಸುಹೈಲ್ ಕಂದಕ್ ಮೇಲೆ ಹಲ್ಲೆಯಾಗಿದ್ದು, ಆತ ನೇತಾಜಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆಗೆ ಸಂಬಂಧಿಸಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿ, ದೂರು, ಪ್ರತಿದೂರುಗಳು ದಾಖಲಾಗಿವೆ. ಇರ್ಶಾದ್ ನೀಡಿರುವ ದೂರಿನನ್ವಯ ಬಶೀರ್, ಸುಹೈಲ್ ಕಂದಕ್ ಮತ್ತು ತಂಡದ ವಿರುದ್ಧ ದೂರು ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಸುಹೈಲ್ ಕಂದಕ್ ನೀಡಿರುವ ದೂರಿನ್ವಯ ಸಲ್ಮಾನ್ ಮತ್ತು 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಗುಂಡು ಹಾರಾಟಕ್ಕೆ ಸಂಬಂಧಿಸಿ 6 ಮಂದಿ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯನ್ನು ಬಂಧಿಸಲಾಗಿದೆ. ಮೂರು ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಘಟನೆಯ ಸಂದರ್ಭ ಆರು ಗುಂಡುಗಳನ್ನು ಬಳಸಿರುವುದಾಗಿ ಸುಹೈಲ್ ಕಂದಕ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ 2 ಸಜೀವ ಹಾಗೂ 1 ಬಳಸಲ್ಪಟ್ಟ ಗುಂಡು ದೊರಕಿದೆ. ಈ ಬಗ್ಗೆ ಎಫ್‌ಎಸ್‌ಎಲ್ ತಂಡ ಸಮಗ್ರ ತನಿಖೆಯನ್ನು ನಡೆಸುತ್ತಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.

ಘಟನೆ ತಡರಾತ್ರಿ ನಡೆದಿದ್ದು, ಘಟನೆ ನಡೆದ ಸ್ಥಳಕ್ಕೆ ಹಾಗೂ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಡಿಸಿಪಿ (ಕ್ರೈಂ) ಲಕ್ಷ್ಮೀ ಗಣೇಶ್, ಡಿಸಿಪಿ(ಲಾ) ಅರುಣಾಂಗ್ಸು ಗಿರಿ, ಎಸಿಪಿ ಕೋದಂಡ ರಾಮ, ಉಳ್ಳಾಲ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಸಿಸಿಬಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಕಾನೂನು ರೀತಿ ಕ್ರಮ ಕೈಗೊಂಡಿದ್ದಾರೆ.ಈ ಘಟನೆ ಸೂಕ್ಷ್ಮ ವಿಚಾರವಾಗಿರುವುದರಿಂದ ತಕ್ಷಣ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದು, ಅವರನ್ನು ಅಭಿನಂದಿಸುತ್ತಿರುವುದಾಗಿ ತಿಳಿಸಿದ ಆಯುಕ್ತ ಡಾ. ಹರ್ಷ, ಸಿಬ್ಬಂದಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಲಕ್ಷ್ಮೀ ಗಣೇಶ್ ಹಾಗೂ ಅರುಣಾಂಶುಗಿರಿ ಉಪಸ್ಥಿತರಿದ್ದರು.

Comments are closed.