ಕರಾವಳಿ

ಹೆಣ್ಣು ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ ; ತಪ್ಪಿತಸ್ಥರಿಗೆ ದಂಡ ಹಾಗೂ ಜೈಲು ಶಿಕ್ಷೆ

Pinterest LinkedIn Tumblr

ಮಂಗಳೂರು : ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ನಡೆದ ಜನನ ಪೂರ್ವ ಲಿಂಗ ನಿರ್ಣಯ(ನಿರ್ಬಂಧ ಮತ್ತು ದುರ್ಬಳಕೆ)ತಡೆ ಕಾಯ್ದೆ 1994 ಕ್ಕೆ ಸಂಬಂಧಿಸಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಇವರು, ಭ್ರೂಣ ಹತ್ಯೆ ಮುಂದುವರಿದ ನಾಗರಿಕ ಸಮಾಜದಲ್ಲಿ ನಡೆಯುತ್ತಿರುವುದು ಭೀಕರ ಸಮಸ್ಯೆಯಾಗಿದೆ. ಹೆಣ್ಣು ಗಂಡು ಬೇಧ ಬೇಡ ಕೂಡಿ ಬಾಳುವ ಹೆಣ್ಣು ಭ್ರೂಣ ಹತ್ಯೆಯಿಂದ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಲಿಂಗಾನುಪಾತದಲ್ಲಿ ಏರುಪೇರಾಗಿ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿ ಮುಂದೊಂದಿನ ಬಗೆಹರಿಸದ ಸಮಸ್ಯೆಯಾಗಲಿದೆ ಎಂದು ಹೇಳಿದರು.

ಗರ್ಭಿಣಿ ಮಹಿಳೆಯರ ಉಪಯೋಗಕ್ಕೆಂದು ಬಳಕೆಯಾಗಬೇಕಿದ್ದ ಸ್ಕ್ಯಾನಿಂಗ್ ಸೆಂಟರ್‍ಗಳು ಭ್ರೂಣ ಲಿಂಗ ಪತ್ತೆಯಂತಹ ಕಾನೂನು ಬಾಹಿರ ಕೆಲಸಗಳಿಗೆ ದುರ್ಬಳಕೆಯಾಗುತ್ತಿರುವುದು ಕಳವಳಕಾರಿ. ಗಂಡು ಮಕ್ಕಳ ಆಸೆಯಿಂದ ಭ್ರೂಣ ಪತ್ತೆ ಮಾಡುತ್ತಾರೆ ಹಾಗೂ ಒಂದೇ ಮಗು ಬೇಕು, ಅದು ಗಂಡು ಮಗುವಾಗಿರಬೇಕು ಎಂದು ಲಿಂಗ ಪತ್ತೆಯಂತಹ ಅಪರಾಧ ಮಾಡುತ್ತಾರೆ. ಇಂತಹ ಹೇಯ ಕೃತ್ಯ ಮಾಡುವಂತಹ ತಪ್ಪಿತಸ್ಥರಿಗೆ ಕಾನೂನು ರೀತಿಯಲ್ಲಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಿದಾಗ ಭ್ರೂಣ ಹತ್ಯೆ ತಡೆಯಬಹುದಾಗಿದೆ ಎಂದು ರಾಮಕೃಷ್ಣ ರಾವ್ ತಿಳಿಸಿದರು.

ಸಭೆಯಲ್ಲಿ ಕುಟುಂಬ ಕಲ್ಯಾಣಾಧಿಕಾರಿ ಸಿಖಂದರ್ ಪಾಷಾ ಹಾಗೂ ಜಿಲ್ಲಾಮಟ್ಟದ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Comments are closed.