ಕರಾವಳಿ

ಮಂಗಳೂರು : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.10 :ಸೌಲಭ್ಯಗಳಲ್ಲಿನ ವಿಳಂಬ ನೀತಿಯನ್ನು ಖಂಡಿಸಿ,ನಿವ್ರತ್ತಿ ವೇತನದಲ್ಲಿ ಇರುವ ಗೊಂದಲಗಳನ್ನು ನಿವಾರಿಸಬೇಕು,ಪಾಸಾದ ಎಲ್ಲಾ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡಬೇಕು,ಕಾರ್ಮಿಕ ಇಲಾಖೆಯಲ್ಲಿ ಇರುವ ಅವ್ಯವಸ್ಥೆಗಳನ್ನು ಸರಿಪಡಿಸಲು ಒತ್ತಾಯಿಸಿ CITU ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘಟನೆ(CWFI) ನೇತ್ರತ್ವದಲ್ಲಿ ಸೋಮವಾರ ನಗರದ  ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ಜರುಗಿತು.

ಸುಮಾರು 600ಕ್ಕೂ ಮಿಕ್ಕಿದ ಕಟ್ಟಡ ಕಾರ್ಮಿಕರು,ವಿದ್ಯಾರ್ಥಿ ವೇತನ,ನಿವ್ರತ್ತಿ ವೇತನ, ವೈದ್ಯಕೀಯ ಸೌಲಭ್ಯಗಳಲ್ಲಿನ ಗೊಂದಲಗಳನ್ನು ನಿವಾರಿಸಬೇಕು,ಸಿಬ್ಬಂದಿಗಳ ಕೊರತೆ,ಇಲಾಖೆಯಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಿರಿ,
ಕಟ್ಟಡ ಕಾರ್ಮಿಕರ ಬದುಕನ್ನು ನಾಶಗೊಳಿಸಿದ ಕೇಂದ್ರ ಸರಕಾರಕ್ಕೆ ಧಿಕ್ಕಾರ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಕೇಂದ್ರ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಜರುಗಿದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ CITU ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು, ಕೇಂದ್ರ ಸರಕಾರವು ಈಗಾಗಲೇ ನೋಟು ಅಮಾನ್ಯೀಕರಣ ಹಾಗೂ GST ನೀತಿಗಳನ್ನು ಜಾರಿಗೊಳಿಸಿದ್ದರ ಪರಿಣಾಮವಾಗಿ ಇಡೀ ದೇಶದಲ್ಲಿ ಕಟ್ಟಡ ಉದ್ಯಮವು ಸಂಪೂರ್ಣವಾಗಿ ಕುಸಿದಿದೆ. ಇದರಿಂದಾಗಿ ದೇಶದ ಪ್ರಮುಖ 30 ನಗರಗಳಲ್ಲಿ ಸರಿಸುಮಾರು 13 ಕೋಟಿಯಷ್ಟು ನಿರ್ಮಾಣಗೊಂಡ ಮನೆಗಳು ಮಾರಾಟವಾಗದೆ ಬಾಕಿಯಾಗಿದೆ.

ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕಾರ್ಮಿಕ ಕಾನೂನುಗಳನ್ನು ಇನ್ನಿಲ್ಲವಾಗಿಸಲು ಹೊರಟ ಕೇಂದ್ರ ಸರಕಾರವು ನಿರ್ದಿಷ್ಠವಾಗಿ ಕಟ್ಟಡ ಕಾರ್ಮಿಕರ ಪ್ರಮುಖ 2 ಕಾನೂನುಗಳನ್ನೇ ರದ್ದುಗೊಳಿಸಿದೆ.ಇದರಿಂದಾಗಿ ದೇಶದ 4 ಕೋಟಿ ಕಟ್ಟಡ ಕಾರ್ಮಿಕರು ಈಗ ಪಡೆಯುತ್ತಿರುವ ಹಲವಾರು ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದು ಹೇಳಿದರು.

CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, *ಕರ್ನಾಟಕ ರಾಜ್ಯದಲ್ಲಿ ತರಾತುರಿಯಲ್ಲಿ ಆನ್ ಲೈನ್ ಯೋಜನೆ ಜಾರಿಯಾಗಿದೆ.ಇದರಿಂದ ಕಾರ್ಮಿಕ ಇಲಾಖೆಗಳಲ್ಲಿ ನೊಂದಾವಣೆ ನವೀಕರಣ ಹಾಗೂ ವಿವಿಧ ಸೌಲಭ್ಯಗಳ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಲಿಂಕ್ ಆಗದೇ ಇರುವ ಕಾರಣದಿಂದ ಎಲ್ಲಾ ಅರ್ಜಿಗಳು ಇನ್ನಷ್ಟು ವಿಳಂಬವಾಗುತ್ತಿದೆ.ಕಲ್ಯಾಣ ಮಂಡಳಿಯ ಸೂಚನೆಯನ್ನು ಧಿಕ್ಕರಿಸಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪಾಸಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವಲ್ಲಿ ವ್ಯಾಸಂಗ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿರುವುದು ತೀರಾ ಖಂಡನೀಯವಾಗಿದೆ* ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CWFI ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು,  ಕಳೆದ ಹಲವಾರು ತಿಂಗಳುಗಳಿಂದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಟ್ಟಡ ಕಾರ್ಮಿಕರ ಅರ್ಜಿಗಳನ್ನು ವಿಲೇವಾರಿ ಮಾಡದೆ ಸತಾಯಿಸುತ್ತಿರುವ ಸಂಧರ್ಭದಲ್ಲಿ ಕಾರ್ಮಿಕರ ಸಂಕಷ್ಟಗಳನ್ನು ಎಳೆಎಳೆಯಾಗಿ ವಿವರಿಸುತ್ತಾ,ಬೋಗಸ್ ಅರ್ಜಿದಾರರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬದಲು ನಿಜವಾದ ಕಟ್ಟಡ ಕಾರ್ಮಿಕ ಅರ್ಜಿದಾರರನ್ನು ಪರಿಶೀಲನೆಯ ನೆಪದಲ್ಲಿ ಅಧಿಕಾರಿಗಳು ಅವಮಾನಗೊಳಿಸುತ್ತಿ ರುವುದು ತೀರಾ ಖಂಡನೀಯ.

ಕೇಂದ್ರ ಸರಕಾರದ ತಪ್ಪು ಅರ್ಥಿಕ ನೀತಿಗಳಿಂದಾಗಿ ಕಟ್ಟಡ ಕಾರ್ಮಿಕರು ಒಂದು ಕಡೆ ಕೆಲಸಗಳನ್ನು ಕಳೆದುಕೊಂಡರೆ, ಮತ್ತೊಂದು ಕಡೆ ತಮ್ಮ ಹೊಟ್ಟಪಾಡಿಗಾಗಿ ಮತ್ತೊಂದು ಕೆಲಸವನ್ನು ಅರಸಿಕೊಂಡು ಹೋಗಲೇಬೇಕಾಗುತ್ತದೆ. ಇಂತಹ ಸಂಧರ್ಭದಲ್ಲಿ ಕಟ್ಟಡ ಕಾರ್ಮಿಕರ ಅರ್ಜಿಗಳನ್ನು ಏಕಾಏಕಿ ತಿರಸ್ಕರಿಸಿ,ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬೆದರಿಸುತ್ತಿರುವುದು ಕಾರ್ಮಿಕ ವರ್ಗಕ್ಕೆ ಮಾಡುವ ಅವಮಾನವಾಗಿದೆ ಎಂದು ಹೇಳಿದರು.

ಪ್ರತಿಭಟನೆಯನ್ನುದ್ದೇಶಿಸಿ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ನಾಯಕರಾದ ಕೆ.ಪಿ.ಜೋನಿ, ಜಯಂತ ನಾಯಕ್,ರವಿಚಂದ್ರ ಕೊಂಚಾಡಿ,CITU ಜಿಲ್ಲಾ ನಾಯಕರಾದ ರಮಣಿ ಮೂಡಬಿದ್ರೆಯವರು ಕಟ್ಟಡ ಕಾರ್ಮಿಕರ ಬವಣೆಗಳನ್ನು ವಿವರಿಸುತ್ತಾ, *ಆದಷ್ಟು ಶೀಘ್ರದಲ್ಲಿ ಸಮಸ್ಯೆಗಳನ್ನು ಪರಿಹರಿಸದಿದ್ದಲ್ಲಿ ಕಾರ್ಮಿಕ ಇಲಾಖೆಗೆ ಮುತ್ತಿಗೆ,ರಸ್ತೆತಡೆ ಮುಂತಾದ ತೀವ್ರ ರೀತಿಯ ಹೋರಾಟಗಳನ್ನು ಸಂಘಟಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಲಾಗುವುದು* ಎಂದು ಹೇಳಿದರು.ಬಳಿಕ ಉನ್ನತ ಮಟ್ಟದ ನಿಯೋಗವೊಂದು ಕಾರ್ಮಿಕ ಅಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿ ವಿವರವಾಗಿ ಚರ್ಚಿಸಲಾಯಿತು.

ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ರಾಧಾ ಮೂಡಬಿದ್ರೆ,ನೋಣಯ್ಯ ಗೌಡ,ಗಿರಿಜಾ ಮೂಡಬಿದ್ರೆ,ರೈತ ಸಂಘದ ಜಿಲ್ಲಾಧ್ಯಕ್ಷರಾದ ಕ್ರಷ್ಣಪ್ಪ ಸಾಲ್ಯಾನ್, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷರಾದ ತಿಮ್ಮಯ್ಯ ಕೊಂಚಾಡಿಯವರು ಭಾಗವಹಿಸಿದ್ದರು.

ಹೋರಾಟದ ನೇತ್ರತ್ವವನ್ನು ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ನಾಯಕರಾದ ಜನಾರ್ಧನ ಕುತ್ತಾರ್,ರಾಮಣ್ಣ ವಿಟ್ಲ,ಚಂದ್ರಹಾಸ ಪಿಲಾರ್,ರೋಹಿದಾಸ್ ತೊಕ್ಕೊಟ್ಟು,ದಿನೇಶ್ ಶೆಟ್ಟಿ, ಆಶೋಕ್ ಶ್ರೀಯಾನ್, ಯಶೋಧಾ, ಮಹಮ್ಮದ್ ತಸ್ರೀಫ್,ಶಂಕರ ವಾಲ್ಪಾಡಿ, ಜಯಾನಂದ ಮಾರೂರು,ಬಿಜು ಅಗಸ್ಟಿನ್,ನಾಗರಾಜ್ ಸುಳ್ಯ, ದಯಾನಂದ ಶೆಟ್ಟಿಗಾರ್, ಲೋಕೇಶ್ ಎಂ,ಅಶೋಕ್ ಸಾಲ್ಯಾನ್ ಮುಂತಾದವರು ವಹಿಸಿದ್ದರು.

Comments are closed.