
ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ಎಂಬಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಏಳು ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಆರೋಪಿಗಳ ವಶದಲ್ಲಿದ್ದ ನಿಷೇದಿತ ಮಾದಕ ವಸ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕ್ಯಾಲಿಕಟ್, ಕೇರಳದ ಮೊಹಮ್ಮದ್ ಸಿನಾನ್.ಪಿ. (21), ತ್ರಿಶ್ಯೂರ್ ನಿವಾಸಿ ಹಫೀಝ್ ಅಮೀನ್, (21), ಕಣ್ಣೂರು ನಿವಾಸಿ ಜುಹೈರ್.ಕೆ.ಪಿ., (21), ಕ್ಯಾಲಿಕಟ್ ನಿವಾಸಿ ಆದರ್ಶ್ (20), ಕೋಝಿಕ್ಕೋಡ್ ನಿವಾಸಿಗಳಾದ ಮೊಹಮ್ಮದ್ ನಿಹಾಲ್.ಆರ್.ಕೆ., ಬಿಶ್ರುಲ್ ಹಫೀ (20) ಮತ್ತು ಜಾಕೀರ್ ಅಲಿ.ಪಿ. (22) ಎಂದು ಹೆಸರಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್. ಮತ್ತು ಪೊಲೀಸ್ ಉಪ-ನಿರೀಕ್ಷಕರಾದ ಗುರಪ್ಪ ಕಾಂತಿ, ವಿನಾಯಕ ತೋರಗಲ್, ಮತ್ತು ಸಿಬ್ಬಂದಿಯವರು ಹಾಗೂ ರೌಡಿ ನಿಗ್ರದ ದಳದ ಸಿಬ್ಬಂದಿಯವರು ಪತ್ತೆ ಮಾಡಿ ಆರೋಪಿಗಳಿಂದ ಒಟ್ಟು 1 ಕಿಲೋ 103 ಗ್ರಾಂ ತೂಕದ ನಿಷೇದಿತ ಮಾದಕ ವಸ್ತು ಗಾಂಜಾ, ಅಂದಾಜು ರೂ.1 ಲಕ್ಷ ಮೌಲ್ಯದ ಬುಲೆಟ್ ಬೈಕ್ , ಅಂದಾಜು ರೂ 23 ಸಾವಿರದ ಮೊಬೈಲ್ ಗಳು, ರೂ.460 ನಗದು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣಾ ಮೊ.ನಂ. 99/2019 ಕಲಂ 8(ಸಿ), 20(b)(ii)B ಎನ್.ಡಿ.ಪಿ.ಎಸ್.ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಆರೋಪಿಗಳೆಲ್ಲರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, ಇವರುಗಳು ಮೆಡಿಕಲ್ ಕಾಲೇಜ್ ಮತ್ತಿತರ ಕಾಲೇಜ್ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವವರಾಗಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಡಾ: ಪಿ.ಎಸ್.ಹರ್ಷ, ರವರ ನಿರ್ದೇಶನದಂತೆ ಡಿ.ಸಿ.ಪಿಗಳಾದ ಅರುಣಾಂಗ್ಶು ಗಿರಿ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಲಕ್ಷ್ಮೀಗಣೇಶ (ಅಪರಾಧ ಮತ್ತು ಸಂಚಾರ) ರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ. ಶ್ರೀ ಟಿ.ಕೋದಂಡರಾಮ ರವರ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆ ಮಾಡಿರುತ್ತಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್. ಪೊಲೀಸ್ ಉಪ-ನಿರೀಕ್ಷಕರಾದ ಗುರಪ್ಪ ಕಾಂತಿ, ವಿನಾಯಕ ತೋರಗಲ್, ಮತ್ತು ಸಿಬ್ಬಂದಿಗಳಾದ ಮನೋಹರ, ರಂಜಿತ್, ಪ್ರಶಾಂತ್, ಲಿಂಗರಾಜ್ ಅಕ್ಬರ್ ಹಾಗೂ ರೌಡಿ ನಿಗ್ರದ ದಳದ ಸಿಬ್ಬಂದಿಯವರು ಭಾಗವಹಿಸಿದ್ದರು.
Comments are closed.