ಕರಾವಳಿ

ಕಲ್ಕೂರ ಪ್ರತಿಷ್ಠಾನದ ಶ್ರೀಕೃಷ್ಣ ವೇಷ ಸ್ಪರ್ಧೆಗೆ ಹರಿದು ಬಂದ ಕೃಷ್ಣ ಸಾಗಾರ : ನಂದ ಗೋಕುಲವಾಗಿ ಮಾರ್ಪಟ್ಟ ಕದ್ರಿ ಶ್ರೀ ಕ್ಷೇತ್ರ

Pinterest LinkedIn Tumblr

(ಶ್ರೀಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮದ 60ಕ್ಕೂ ಹೆಚ್ಚು ಚಿತ್ರವನ್ನು ಇಲ್ಲಿ ಕಾಣ ಬಹುದು)

ಮಂಗಳೂರು, ಆಗಸ್ಟ್, 24: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆ ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ಮೂರುವರೆ ದಶಕಗಳಿಂದ ಕಲ್ಕೂರ ಪ್ರತಿಷ್ಠಾನ ನಡೆಸಿಕೊಂಡು ಬಂದಿರುವ ರಾಷ್ಟ್ರಮಟ್ಟದ ಮಕ್ಕಳ ಉತ್ಸವ-ಶ್ರೀ ಕೃಷ್ಣ ವೇಷ ಸ್ಪರ್ಧೆಯು ಕೃಷ್ಣಾಷ್ಟಮಿಯ ದಿನವಾದ ಶುಕ್ರವಾರ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾಠಾರದಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು.

ಶ್ರೀ ಕೃಷ್ಣ ಜನ್ಮಷ್ಟಾಮಿಯ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿರುವ 35ನೇ ವರ್ಷದ ರಾಷ್ಟ್ರೀಯ ಮಕ್ಕಳ ಉತ್ಸವದ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪುಟಾಣಿಗಳು ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ವೇಷಧಾರಿಗಳು ಭಾಗವಹಿಸಿದ್ದರು.

ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಶ್ರೀ ಕೃಷ್ಣ, ಬಾಲ ಕೃಷ್ಣ, ಕಿಶೋರ ಕೃಷ್ಣ, ಗೀತಾ ಕೃಷ್ಣ, ಶಂಖನಾದ, ಶಂಖ ಉದ್ಘೋಷ, ರಾಧಾ ಕೃಷ್ಣ, ರಾಧಾ ಮಾಧವ, ದೇವಕಿ ಕೃಷ್ಣ, ಯಶೋಧ ಕೃಷ್ಣ, ವಸುದೇವ ಕೃಷ್ಣ, ಯಕ್ಷ ಕೃಷ್ಣ, ನಂದಗೋಕುಲ, ಅಚ್ಚುತರಸಪ್ರಶ್ನೆ, ಮಾಧವ ರಸಪ್ರಶ್ನೆ ಕೇಶವ ರಸಪ್ರಶ್ನೆ, ಛಾಯಕೃಷ್ಣ ಈ ಎಲ್ಲಾ ಸ್ಪರ್ಧೆಗಳು ಕದ್ರಿ ಶ್ರೀ ಮಂಜುನಾಥ ದೇವಳದ ಆವರಣ ವಿವಿಧ ಸ್ಥಳಗಳಲ್ಲಿ ನಡೆಯಿತು.

ಒಟ್ಟು 30 ವಿಭಾಗದಲ್ಲಿ ಏಕಕಾಲದಲ್ಲಿ 9 ವೇದಿಕೆಯಲ್ಲಿ ಸ್ಪರ್ಧೆ ನಡೆಯಿತು. ಎಲ್ಲಿ ನೋಡಿದರೂ ಮುದ್ದು ಕೃಷ್ಣ, ಬಾಲಕೃಷ್ಣ, ರಾಧಾ ಕೃಷ್ಣ, ಯಶೋಧೆ-ಕೃಷ್ಣ, ದೇವಕಿ ಕೃಷ್ಣ, ಯಶೋಧ ಕೃಷ್ಣ, ವಸುದೇವ ಕೃಷ್ಣ, ಯಕ್ಷಕೃಷ್ಣರೇ ತುಂಬಿದ್ದರು.

ಕದ್ರಿ ಶ್ರೀ ಮಂಜುನಾಥೇಶ್ವರ ಕ್ಷೇತ್ರದ ಅಂಗಣ ಶುಕ್ರವಾರ ಅಕ್ಷರಶಃ ನಂದಗೋಕುಲವಾಗಿ ಮಾರ್ಪಟ್ಟಿತ್ತು. ಅಲ್ಲಿ ಕಂದಕೃಷ್ಣ, ಮುದ್ದುಕೃಷ್ಣರ ಬಾಲಲೀಲೆ ಎಲ್ಲರ ಆಕರ್ಷಣೆ ಪಡೆದಿತ್ತು. ಅಂಗಣದ ತುಂಬೆಲ್ಲಾ ಮಕ್ಕಳದ್ದೇ ಕಲರವ ತುಂಬಿತ್ತು.ಅಮ್ಮನ ಅಪ್ಪುಗೆಗಾಗಿ ರಚ್ಚೆ ಹಿಡಿಯುತ್ತಿದ್ದ ಕಂದ ಕೃಷ್ಣ, ಅಂಬೆಗಾಲಿಡುತ್ತಾ ಅತ್ತಿಂದಿತ್ತ ಓಡಾಡಿಕೊಂಡಿದ್ದ ತುಂಟ ಕೃಷ್ಣ, ಕೊಳಲನಿಡಿದ ಬಾಲಕೃಷ್ಣ, ಕಿಶೋರ ಕೃಷ್ಣರು ಅಲ್ಲಿದ್ದರು.

ತಮ್ಮ ಮಗುವಿಗೆ ಶ್ರೀಕೃಷ್ಣನ ವೇಷ ತೊಡಿಸಿದ ಅಮ್ಮಂದಿರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಶ್ರೀಕೃಷ್ಣ ವೇಷ ಸ್ಪರ್ಧೆಯ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಶ್ರೀಕ್ಷೇತ್ರಕ್ಕೆ ಬರುವವರ ಸಂಖ್ಯೆ ಹೆಚ್ಚಿತ್ತು. ಅಲ್ಲೊಂದು ಹಬ್ಬದ ವಾತಾವರಣ ನಿರ್ಮಾಣವಾಗಿಬಿಟ್ಟಿತ್ತು. 30 ವಿಭಾಗಗಳಲ್ಲಿ ವಿವಿಧ ವೇದಿಕೆಯಲ್ಲಿ ಸ್ಪರ್ಧೆಗಳು ನಡೆದವು. ಕಂದಕೃಷ್ಣ, ಮುದ್ದುಕೃಷ್ಣ, ತುಂಟಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀಕೃಷ್ಣ, ಗೀತಾಕೃಷ್ಣ, ಯಕ್ಷಕೃಷ್ಣ, ರಾಧಾಕೃಷ್ಣ, ಯಶೋಧಕೃಷ್ಣ ಹೀಗೆ ವಿವಿಧ ವಿಭಾಗಗಳಲ್ಲಿ ಏಕ ಕಾಲದಲ್ಲಿ ಸ್ಪರ್ಧೆಗಳು ನಡೆದವು.

ಶಾರದ ವಿದ್ಯಾಲಯದಲ್ಲಿ ಶ್ರೀಕೃಷ್ಣ ವರ್ಣ ವೈಭವ ಸ್ಪರ್ಧೆ : ಇದೇ ವೇಳೆ ನಗರದ ಕೊಡಿಯಾಲ್ ಬೈಲ್ ಶಾರದ ವಿದ್ಯಾಲಯದಲ್ಲಿ ಶುಕ್ರವಾರ ಬೆಳಗ್ಗೆ ಶ್ರೀಕೃಷ್ಣ ಗಾನ ವೈಭವ, ರಂಗೋಲಿಯಲ್ಲಿ ಶ್ರೀ ಕೃಷ್ಣ ಹಾಗೂ ಶ್ರೀಕೃಷ್ಣ ವರ್ಣ ವೈಭವ ಸ್ಪರ್ಧೆಗಳು ನಡೆಯಿತು.

ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣರಿಂದ ಕಾರ್ಯಕ್ರಮ ಉದ್ಘಾಟನೆ : ಆಶೀರ್ವಚನ

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಅವರ ನೇತ್ರತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ಕಟೀಲು ಕ್ಷೇತ್ರದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಕಲ್ಕೂರ ಪ್ರತಿಷ್ಠಾನ ಪ್ರತಿವರ್ಷ ಮಕ್ಕಳ ಉತ್ಸವ ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸುತ್ತಿದೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಅವರು ಶುಭ ಹಾರೈಸಿದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ 34 ವರ್ಷಗಳಿಂದ ಶ್ರೀಕೃಷ್ಣವೇಷ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ಕೂಡ ನಿರೀಕ್ಷೆಯಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಎಂದರು.

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಟ್ರಷ್ಠಿ ಹಾಗೂ ಎ.ಜೆ.ಸಂಸ್ಥೆಯ ಅಧ್ಯಕ್ಷ ಎ.ಜೆ.ಶೆಟ್ಟಿ, ಪ್ರಮುಖರಾದ ಎಂ.ಬಿ. ಪುರಾಣಿಕ್, ಹರಿಕೃಷ್ಣ ಪುನರೂರು, ಕದ್ರಿ ನವನೀತ ಶೆಟ್ಟಿ, ವಿಜಯಲಕ್ಷ್ಮೀ ಶೆಟ್ಟಿ, ರತ್ನಾಕರ ಜೈನ್, ದಯಾನಂದ ಕಟೀಲ್, ಸುಧಾಕರ ರಾವ್ ಪೇಜಾವರ, ಜನಾರ್ದನ ಹಂದೆ ಹಾಗೂ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕೃಷ್ಣ ವೇಷಧಾರಿ ಮಕ್ಕಳಿಗೆ ಆಕರ್ಷಕ ಉಡುಪಿ ಕಡಗೋಲು ಕೃಷ್ಣನ ಪಂಚಲೋಹದ ವಿಗ್ರಹ, ಪ್ರೋತ್ಸಾಹಕ ಬಹುಮಾನ ಹಾಗೂ ಪ್ರಶಂಸನಾ ಪತ್ರಗಳನ್ನು ಸ್ಥಳದಲ್ಲೇ ನೀಡಲಾಯಿತು. ಇದೇ ಸಂದರ್ಭದಲ್ಲಿ ಪ್ರಧಾನ ವೇದಿಕೆಯಲ್ಲಿ ವಿವಿಧ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮ, ರಸಪ್ರಶ್ನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಾರ್ವಜನಿಕರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರೋತ್ಸಾಹವನ್ನು ನೀಡಿದರು.

ವರದಿ / ಚಿತ್ರ : ಸತೀಶ್ ಕಾಪಿಕಾಡ್

Comments are closed.