ಕರಾವಳಿ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಂಸದ ನಳಿನ್ ‌ಕುಮಾರ್ ಕಟೀಲ್ ನೇಮಕ

Pinterest LinkedIn Tumblr

ಬೆಂಗಳೂರು / ಮಂಗಳೂರು,ಆಗಸ್ಟ್.20: ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ‌ಕುಮಾರ್ ಕಟೀಲ್ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ.

ನಿಕಟಪೂರ್ವ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಆಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.ಈ ಮೂಲಕ ಸಚಿವ ಸ್ಥಾನ ತಪ್ಪಿರುವ ಕರಾವಳಿ ಜಿಲ್ಲೆಗೆ ಬಿಜೆಪಿ ಹೈ ಕಮಾಂಡ್ ಒಂದಿಷ್ಟು ಸಮಾಧಾನವಾಗುವಂತೆ ಮಾಡಿದೆ.

ಪಕ್ಷದ ಪ್ರಮುಖರಾದ ಸಿ.ಟಿ. ರವಿ, ಅರವಿಂದ ಲಿಂಬಾವಳಿ,ಸುನೀಲ್ ಕುಮಾರ್, ಶ್ರೀರಾಮುಲು ಹೀಗೆ ಹಲವರ ಹೆಸರುಗಳು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದ್ದವು. ಅವರೊಂದಿಗೆ ಸಂಸದ ನಳಿನ್ ಕುಮಾರ್ ಅವರ ಹೆಸರು ಕೂಡ ಕೇಳಿ ಬಂದಿತ್ತು. ಶಾಸಕ ಸಿ.ಟಿ.ರವಿ ಹೆಸರು ರಾಜ್ಯಾಧ್ಯಕ್ಷ ರೇಸ್ ‌ನಲ್ಲಿ ಮುಂಚೂಣಿಯಲ್ಲಿದ್ದರೂ ಸದ್ಯ ಅವರಿಗೆ ಸಚಿವ ಸ್ಥಾನ ಲಭಿಸಿದೆ. ಬಳಿಕ ಅರವಿಂದ ಲಿಂಬಾವಳಿ ಮತ್ತು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೆಸರು ಕೇಳಿ ಬಂದಿತ್ತು.

ಆದರೆ ರಾಷ್ಟ್ರೀಯ ‌ನಾಯಕರು ಸಂಸದರಾಗಿರುವ ವ್ಯಕ್ತಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿ ಹೆಚ್ಚಿನ ಜವಾಬ್ದಾರಿಯ ಜೊತೆ ಪಕ್ಷ ಸಂಘಟನೆಯ ‌ಮಹತ್ವದ ಕಾರ್ಯ ವಹಿಸಲು ನಿರ್ಧರಿಸಿದ್ದರು. ಬಿ.ಎಲ್.ಸಂತೋಷ್ ಕೂಡ ನಳಿನ್ ಪರ ಒಲವು ಹೊಂದಿದ್ದಾರೆ ಎನ್ನಲಾಗಿದ್ದು, ಅಂತಿಮವಾಗಿ ನಳಿನ್ ಕುಮಾರ್ ಕಟೀಲ್ ಅವರಿಗೆ ಹೈಕಮಾಂಡ್ ಮಣೆ ಹಾಕಿದೆ.

ಈಗಾಗಲೇ ದ.ಕ.ಜಿಲ್ಲೆಯ ಯಾರಿಗೂ ಸಚಿವ ಸ್ಥಾನ ಲಭಿಸದೇ ಇರುವುದು ಕೆಲವರಲ್ಲಿ ಅಸಮಾಧಾನ ಉಂಟು ಮಾಡಿತ್ತು. ಅವಳಿ ಜಿಲ್ಲೆಗಳಾದ ಉಡುಪಿ-ದ.ಕನ್ನಡ ಜಿಲ್ಲೆಯ ಹನ್ನೆರಡು ಮಂದಿ ಶಾಸಕರು ಬಿಜೆಪಿಯಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರೂ ಕೂಡ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಬದಲಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಇದು ಕರಾವಳಿಯನ್ನು ಬಿಜೆಪಿ ಸರಕಾರ ನಿರ್ಲಕ್ಷಿಸಿದೆ ಎಂಬ ಆರೋಪಕ್ಕೆ ಗುರಿಯಾಗಿತ್ತು. ಇದೇ ಕಾರಣದಿಂದಾಗಿ ಕರಾವಳಿ ಭಾಗಕ್ಕೆ ಪ್ರಾಶಸ್ತ್ರ್ಯ ನೀಡುವ ನಿಟ್ಟಿನಲ್ಲಿ ಹಾಗೂ ಸಂಸದರಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಸಂಸದ ನಳಿನ್ ‌ಕುಮಾರ್ ಕಟೀಲ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.

Comments are closed.