ಕರಾವಳಿ

ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ 22 ವರ್ಷದ ಸೇವೆ; ಅಗಲಿದ `ಇಂದಿರಾ’ಗೆ ಭಾವಪೂರ್ಣ ವಿದಾಯ (Video)

Pinterest LinkedIn Tumblr

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸುಮಾರು ಇಪ್ಪತ್ತೆರಡು ವರ್ಷಗಳಿಂದ ಇದ್ದ ‘ಇಂದಿರಾ’ ಹೆಸರಿನ ಹೆಣ್ಣು ಸಲಗ ಮಂಗಳವಾರ ಇಹಲೋಕ ತ್ಯಜಿಸಿದ್ದು ಬುಧವಾರ ಬೆಳಿಗ್ಗೆನಿಂದ ಸಹಸ್ರಾರು ಮಂದಿ ಅಂತಿಮ ದರ್ಶನ ಪಡೆದರು. ವಿವಿಧ ಧಾರ್ಮಿಕ ಕ್ರಿಯೆಗಳು,ಇಂದಿರಾಳ ಮರಣೋತ್ತರ ಪರೀಕ್ಷೆ ಕಾರ್ಯವು ಸಂಜೆಯವರೆಗೂ ನಡೆಯಿತು. ಇಂದಿರಾ ಮರಣದ ಹಿನ್ನೆಲೆ ಕೊಲ್ಲೂರು ಭಾಗಶಃ ಬಂದ್ ಆಗಿತ್ತು. ಆಟೋ, ಜೀಪು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿತ್ತು.

ಫಲಿಸದ ಚಿಕಿತ್ಸೆ…
ಈಕೆ ಹೆಸರು ಇಂದಿರಾ. ವಯಸ್ಸು ಅರವತ್ತೆರಡು. ಇಷ್ಟು ದಿನ ಆಕೆಯಿರುತ್ತಿದ್ದ ಜಾಗವೀಗ ಅವಳಿಲ್ಲದೇ ಅನಾಥವಾಗಿದೆ. ನಿತ್ಯ ಬೆಳಿಗ್ಗೆ ಆಕೆಯನ್ನು ಕಂಡು ಅವಳ ಆಶೀರ್ವಾದ ಪಡೆಯುತ್ತಿದ್ದ ಜನ ಅವಳನ್ನು ತುಂಬಾನೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಆಕೆ ಬೇರ್ಯಾರು ಅಲ್ಲ. ಕೊಲ್ಲೂರು ದೇವಳದ ಆನೆ ಇಂದಿರಾ… ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಕಳೆದ 22 ವರ್ಷದಿಂದ ದೇವಿಗೆ ಸೇವೆ ಸಲ್ಲಿಸುತ್ತಿದ್ದ ಇಂದಿರಾ ಮಂಗಳವಾರ ರಾತ್ರಿ ಹೊತ್ತಿಗೆ ಬಾರದ ಲೋಕಕ್ಕೆ ಪಯಣಿಸಿದ್ದಾಳೆ‌. ಅರವತ್ತೆರಡು ವರ್ಷವಾಗಿದ್ದ ಆಕೆಗೆ ನಾಲ್ಕು ದಿನಗಳಿಂದೀಚೆಗೆ ಜ್ವರ ಬಾಧಿಸಿತ್ತು. ನುರಿತ ವೈದ್ಯರನ್ನು ಕರೆಯಿಸಿ ಉತ್ತಮ ಚಿಕಿತ್ಸೆ ನೀಡಿದ್ದಲ್ಲದೇ ಸುಮಾರು ೫೦ಕ್ಕೂ ಅಧಿಕ ಬಾಟಲಿ ಗ್ಲೂಕೋಸ್ ನೀಡಿ ಇಂದಿರಾಳ ಚೇತರಿಕೆಗೆ ಹರಸಾಹಸಪಟ್ಟಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾದೇ ಇಂದಿರಾ ಇಹಲೋಕ ತ್ಯಜಿಸಿದ್ದಾಳೆ.

(ಇಂದಿರಾ- ಸಂಗ್ರಹ ಚಿತ್ರ)

ಭಕ್ತರ ಪ್ರೀತಿಯ ಸಲಗ!
ದೇವಸ್ಥಾನಕ್ಕೆ ಬರುವ ಭಕ್ತರು ನೀಡುವ ಕಾಣಿಕೆ, ಬಾಳೆಹಣ್ಣುಗಳನ್ನು ಪಡೆದು ಅವರಿಗೆ ಸೋಂಡಿಲೆತ್ತಿ ಆಶಿರ್ವಾದ ಮಾಡುತ್ತಿದ ಇಂದಿರಾ ಯಾವತ್ತು ಯಾರೊಬ್ಬ ಭಕ್ತರಿಗೆ ತೊಂದರೆಕೊಟ್ಟವಳಲ್ಲ. ಅದಕ್ಕಾಗಿಯೇ ಆಕೆ ಸಾವು ಎಲ್ಲರಿಗೂ ನುಂಗಲಾರದ ತುತ್ತಾಗಿತ್ತು. ಆಕೆ ಮಾವುತ ಐಯಣ್ಣ ಯಾನೆ ಬಾಬಣ್ಣ ಸೇರಿದಂತೆ ಆಸುಪಾಸಿನ ಮಂದಿಗೆ ತಡೆಯಲಾರದಷ್ಟು ದುಃಖ ಕಾಣಿಸುತ್ತಿತ್ತು. ಅದಕ್ಕಾಗಿಯೇ ಕೊಲ್ಲೂರಿನಲ್ಲಿ ಆಟೋ ರಿಕ್ಷಾ, ಜೀಪು ಸಂಚಾರವನ್ನು ಸ್ಥಗಿತಗೊಳಿಸಿದ್ದಲ್ಲದೇ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಇಂದಿರಾ ಸಾವಿಗೆ ಕೊಲ್ಲೂರಿನ ನಾಗರೀಕರು ಶೋಕ ವ್ಯಕ್ತಪಡಿಸಿದರು.

((ಇಂದಿರಾ ಇಲ್ಲದ ಆಕೆ ನಿಲ್ಲುತ್ತಿದ್ದ ಸ್ಥಳ ಬಿಕೋ ಅನ್ನುತ್ತಿದೆ))

ಸಹಸ್ರಾರು ಜನರಿಂದ ಕಂಬನಿ..
ಅಂದ ಹಾಗೆ ಬಾಳೆಹೊನ್ನೂರಿನ ಮಧು ಎನ್ನುವರು ದೇವಳಕ್ಕೆ ದಾನ ಕೊಟ್ಟಿದ್ದ ಆನೆಗೆ ಅಂದಿನ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ನೇತ್ರತ್ವದಲ್ಲಿ ಇಂದಿರಾ ಎಂದು ನಾಮಕರಣ ಮಾಡಲಾಗಿತ್ತು. ಅಂದಿನಿಂದ ಬರೋಬ್ಬರಿ ಇಪ್ಪತ್ತೆರಡು ವರ್ಷ ದೇವಿಯ ಸೇವೆಯಲ್ಲಿ ತೊಡಗಿದ್ದ ಇಂದಿರಾ ಪದ್ದತಿಯಂತೆ ನಿತ್ಯ ಬೆಳಿಗ್ಗೆ ದೇವಳದ ಮುಖ್ಯ ದ್ವಾರದ ಮೂಲಕ ಪ್ರವೇಶಿಸಿ ಮೂರು ಸುತ್ತು ಪ್ರದಕ್ಷಿಣೆ ಸಲ್ಲಿಸಿ ಬಳಿಕ ಧ್ವಜಕ್ಕೆ ಹಾಗೂ ಅಧಿಕಾರಿ ಹಾಗೂ ವ್ಯವಸ್ಥಾಪನ ಸಮಿತಿ ಕೊಠಡಿಗೆ ಹಾರೈಸಿ ಬಳಿಕ ದೇವಸ್ಥಾನದ ಹೊರ ಆವರಣದ ತನ್ನ ಸ್ಥಾನದಲ್ಲಿ ಮಾವುತನ ಸಮೇತ ಬಂದು ನಿಂತು ಭಕ್ತರನ್ನು ಸಂತುಷ್ಟಗೊಳಿಸುತ್ತಿದ್ದಳು. ಆದರೆ ಅದೆಲ್ಲಾ ಮಂಗಳವಾರಕ್ಕೆ ಮುಗಿದಿದ್ದು ಆಕೆ ನಿತ್ಯ ನಿಲ್ಲುತ್ತಿದ್ದ ಜಾಗ ಬಿಕೋ ಎನ್ನುತ್ತಿದೆ. ಇನ್ನು ಮರಣ ಹೊಂದಿದ ಇಂದಿರಾಳನ್ನು ಕಾಣಲು ರಾತ್ರಿಯಿಂದಲೇ ಜನರು ಆಗಮಿಸುತ್ತಿದ್ದು ಬುಧವಾರ ಮುಂಜಾನೆಯಿಂದಲೂ ಸುರಿವ ಮಳೆ ಲೆಕ್ಕಿಸದೇ ಸಹಸ್ರಾರು ಮಂದಿ ಕೊಲ್ಲೂರಿನ ಕಲ್ಯಾಣಿಗುಡ್ಡೆಗೆ ಇಂದಿರಾ ಅಂತಿಮ ದರ್ಶನಕ್ಕೆ ಆಗಮಿಸಿದ್ರು. ಬಹುತೇಕರು ಹೂ, ಗಂಧದ ಹಾರ, ಅಗರಬತ್ತಿ ತಂದು ಅರ್ಪಿಸಿ, ಗಜರಾಣಿಗೆ ಸುತ್ತುಹಾಕಿ ಆಕೆಯನ್ನು ಸ್ಪರ್ಷಿಸಿ ಕಣ್ಣಂಚಲ್ಲಿ ನೀರು ಹಾಕಿದ್ರು.

(ಸ್ತಭ್ದವಾದ ಕೊಲ್ಲೂರು)

ಇಡೀ ದಿನ ನಡೆದ ವಿವಿಧ ಪ್ರಕ್ರಿಯೆ..
ಅರಣ್ಯ ಇಲಾಖೆ ಹಾಗೂ ಸಕ್ಕರೆಬೈಲಿನಿಂದ ಬಂದ ನುರಿತ ವೈದ್ಯರಿಂದ ನಾಲ್ಕೈದು ಗಂಟೆಗಳ ಕಾಲ ಮರಣೋತ್ತರ ಪರೀಕ್ಷೆ ನಡೆಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಸಮೇತ ಅಧಿಕಾರಿಗಳು ಸಿಬ್ಬಂದಿಗಳು ಕೂಡ ನೋವಿನಲ್ಲಿಯೇ ಇಂದಿರಾಳನ್ನು ಪಂಚಭೂತಗಳಲ್ಲಿ ಲೀನಗೊಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾದ್ರು. ಸಕಲ ದಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ಗಜ ಕಳಷ ಹೋಮವನ್ನು ನಡೆಸಲಾಯ್ತು. ಆಕೆ ಇರುತ್ತಿದ್ದ ಶೆಡ್ ಸಮೀಪದಲ್ಲಿಯೇ ಆಕೆಯನ್ನು ಕ್ವಿಂಟಾಲುಗಟ್ಟಲೇ ಕಟ್ಟಿಗೆ, ಐದು ಡಬ್ಬಿ ತುಪ್ಪ, ಗಂಧದ ಮೂಲಕ ಚಿತೆ ಸಿದ್ದಪಡಿಸಿ ಮುಸ್ಸಂಜೆ ಹೊತ್ತಿಗೆ (6PM) ಅಗ್ನಿಸ್ಪರ್ಷ ಮಾಡಲಾಗಿದೆ.

ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಹಿರಿಯ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ ಸೇರಿದಂತೆ ಸದಸ್ಯರುಗಳು, ಮಾಜಿ ಅಧ್ಯಕ್ಷ ಅಪ್ಪಣ್ಣ ಹೆಗ್ಡೆ, ವಿವಿಧ ಪಕ್ಷಗಳ ಮುಖಂಡರು, ಅರಣ್ಯ, ಪೊಲೀಸ್ ಇಲಾಖಾಧಿಕಾರಿಗಳು ಭೇಟಿ ನೀಡಿದ್ದರು.

ಚಿತ್ರ, ವರದಿ- ಯೋಗೀಶ್ ಕುಂಭಾಸಿ

ಇದನ್ನೂ ಓದಿ:

ಕೊಲ್ಲೂರು ಮೂಕಾಂಬಿಕಾ ದೇವಳದಲ್ಲಿದ್ದ ‘ಇಂದಿರಾ’ ಆನೆ ಇನ್ನಿಲ್ಲ: ಶೋಕದಲ್ಲಿ ಸ್ಥಳೀಯರು

Comments are closed.