ಮಂಗಳೂರು, ಆಗಸ್ಟ್.09: ಮಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಡಾ.ಹರ್ಷ. ಪಿ.ಎಸ್, ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ನಿಕಟಪೂರ್ವ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಡಾ.ಹರ್ಷ. ಪಿ.ಎಸ್ ಅವರನ್ನು ನೇಮಕಗೊಳಿಸಿ ಸರಕಾರ ಅದೇಶ ಹೊರಡಿಸಿತ್ತು.
ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ನೂತನ ಅಯುಕ್ತರು, ದ.ಕ.ಜಿಲ್ಲೆಯ ಜನರ ಬಗ್ಗೆ ಹೆಮ್ಮೆ ಇದೆ. ಇಲ್ಲಿನ ಜನತೆ ಕಾನೂನು ಮೀರುವವರಲ್ಲ, ಬದಲಾಗಿ ಕಾನೂನಿಗೆ ಗೌರವ ನೀಡುವಂಥವರು. ಈ ಹಿನ್ನೆಲೆಯಲ್ಲಿ ತಾನು ಮಂಗಳೂರು ಆಯುಕ್ತರಾಗಿರುವುದು ತುಂಬಾ ಸಂತೋಷದ ವಿಚಾರ. ಅಧಿಕಾರವನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ಕಾಳಜಿ ವಹಿಸುತೇನೆ. ಜೊತೆಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿ ತರಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್, ಎಸಿಪಿಗಳಾದ ಶ್ರೀನಿವಾಸ ಗೌಡ, ಕೋದಂಡರಾಮ, ವಿನಯ ಗಾಂವ್ಕರ್, ಭಾಸ್ಕರ್ ಒಕ್ಕಲಿಗ, ಮಂಜುನಾಥ ಶೆಟ್ಟಿ ಮತ್ತಿತರ ಪೊಲೀಸ್ ಅಧಿಕಾರಿಗಳು ಈ ಸಂದರ್ಭ ಉಪಸ್ಥಿರಿದ್ದರು.
ಎಎಸ್ಪಿಯಾಗಿದ್ದಾಗ ಪುತ್ತೂರು ವ್ಯಾಪ್ತಿಯಲ್ಲಿ ಗೂಂಡಾಗಿರಿ ಮಟ್ಟ ಹಾಕಿದ ಅಧಿಕಾರಿ :
2004ರ ಐಪಿಎಸ್ ಬ್ಯಾಚ್‌ನವರಾಗಿರುವ ಡಾ. ಹರ್ಷ ಅವರು ಈ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು ಇದರ ಭದ್ರತಾ ವಿಭಾಗದ (ವಿಜಿಲೆನ್ಸ್ ಮತ್ತು ಸೆಕ್ಯೂರಿಟಿ) ನಿರ್ದೇಶಕರಾಗಿದ್ದರು ಕಾರಾಗೃಹ ಇಲಾಖೆ ಡಿಐಜಿಯಾಗಿಯೂ ಕರ್ತವ್ಯ ನಿರ್ವಾಹಿಸಿದ್ದರು., 2017ರಲ್ಲಿ ವಾರ್ತಾ ಇಲಾಖೆಯ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು.
ಅಲ್ಲದೆ ಪುತ್ತೂರು ಉಪವಿಭಾಗದ ಎಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಪುತ್ತೂರಿನಲ್ಲಿ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸಂದರ್ಭ ಪುತ್ತೂರು ದೇವಸ್ಥಾನ ಎದುರು ನಡೆದ ಶನಿಪೂಜೆ ವಿವಾದದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮಿಸಿದ್ದರು. ಇದು ಮಾತ್ರವಲ್ಲದೆ, ಈ ವ್ಯಾಪ್ತಿಯಲ್ಲಿ ಗೂಂಡಾಗಿರಿ ಮಟ್ಟ ಹಾಕುವಲ್ಲಿ ಕಠಿಣ ಕ್ರಮ ಕೈಗೊಂಡಿದ್ದರು.
ದಕ್ಷ ಅಧಿಕಾರಿ ಸಂದೀಪ್ ಪಾಟೀಲ್ :
ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯ ಜನರ ನೆಮ್ಮದಿಯ ಜೀವನಕ್ಕೆ ಕಾರಣವಾಗಿದ್ದ ಹಾಗೂ ತಮ್ಮ ಉತ್ತಮ ಕಾರ್ಯದಕ್ಷತೆ ಹಾಗೂ ಖಡಕ್ ಕಾರ್ಯವೈಕರಿಯಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಜನಮಾನಸದಲ್ಲಿ ಜನಾನುರಾಗಿಯಾಗಿದ್ದ ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರನ್ನು ಅಧಿಕಾರ ಸ್ವೀಕರಿಸಿದ ಅತೀ ಕಡಿಮೆ ಅವಧಿಯಲ್ಲಿ ವರ್ಗಾವಣೆ ಮಾಡಲಾಗಿದೆ.
ಸಂದೀಪ್ ಪಾಟೀಲ್ ಅವರು ಮಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಫೆಬ್ರವರಿ 22ರಂದು ಅಧಿಕಾರ ಸ್ವೀಕಾರ ಮಾಡಿದ್ದರು. ಸಂದೀಪ್ ಫಾಟೀಲ್ ಅವರು ಕೆಲವೇ ತಿಂಗಳ ಸೇವಾ ಅವಧಿಯಲ್ಲಿ ದಕ್ಷ ಅಧಿಕಾರಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದರು. ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಕೆಲವೇ ದಿನಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಕರ್ತವ್ಯ ನಿಷ್ಠೆಯಿಂದ ಮಂಗಳೂರಿನ ಜನತೆಯ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದ ಓರ್ವ ನಿಷ್ಟವಂತ ಅಧಿಕಾರಿಯಾಗಿದ್ದರು.
ಸಂದೀಪ್ ಪಾಟೀಲ್
ಅಕ್ರಮ ಗೋಸಾಗಾಣಿಕೆ, ಗಾಂಜಾ ಮಾರಾಟಗಾರರಿಗೆ ಕಡಿವಾಣ ಹಾಕಿದ್ದರು. ರೌಡಿಶೀಟರ್‌ಗಳ ಹೆಡೆಮುರಿ ಕಟ್ಟಲು ಶೂಟೌಟ್ ಆದೇಶವನ್ನೂ ನೀಡಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರ ದೂರು ದುಮ್ಮಾನಗಳನ್ನು ಆಲಿಸುತ್ತಿದ್ದ ಸಂದೀಪ್ ಪಾಟೀಲ್ ಪೊಲೀಸ್ ಫೋನ್ ಇನ್ ಕಾರ್ಯಕ್ರಮದ ಮೂಲಕವೂ ಜನಪ್ರಿಯರಾಗಿದ್ದರು.
ಮಾತ್ರವಲ್ಲದೇ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಜುಗಾರಿ, ಮಟ್ಕ, ಲೈವ್‌ಬ್ಯಾಂಡ್, ಸ್ಕಿಲ್ ಗೇಮ್, ರೌಡಿಯಿಸಂ, ಈ ರೀತಿಯ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ( ಯಾವೂದೇ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಸಿಲುಕದೆ) ನಿಯಂತ್ರಿಸುವಲ್ಲಿ ತುಂಬಾ ಯಶಸ್ವಿಯಾಗಿದ್ದರು.
ಮೂಲತಃ ಬೆಂಗಳೂರಿನ ನಿವಾಸಿಯಾಗಿರುವ ಸಂದೀಪ್ ಪಾಟೀಲ್ 2004ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ. ದಾವಣಗೆರೆ, ಬೆಳಗಾವಿ, ಮಂಡ್ಯ ಮೊದಲಾದ ಕಡೆ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ಡಿಐಜಿ ಹುದ್ದೆಗೆ ಭಡ್ತಿ ಹೊಂದಿದ್ದರು. ಬಳಿಕ ಬೆಂಗಳೂರು ಸಿಎಆರ್ ಘಟಕದಲ್ಲಿ ಡಿಐಜಿ ಹಾಗೂ ಜಂಟಿ ಆಯುಕ್ತರಾಗಿದ್ದರು. ಪ್ರಸ್ತುತ ಸಂದೀಪ್ ಪಾಟೀಲ್ ಅವರನ್ನು ಡಿಐಜಿ ಮತ್ತು ಬೆಂಗಳೂರು ನಗರ ಅಪರಾಧ ಇಲಾಖೆಯ ಜಂಟಿ ಆಯುಕ್ತರಾಗಿ ತಕ್ಷಣದಿಂದಲೇ ಅಧಿಕಾರಕ್ಕೆ ಬರುವಂತೆ ನಿಯೋಜಿಸಲಾಗಿದೆ.
Comments are closed.