ಕರಾವಳಿ

ತ್ರಾಸಿಯಲ್ಲಿ ಯುವಕನ ಸುತ್ತುವರಿದು ತಲವಾರು, ಸ್ಟಮ್’ನಿಂದ ಗಂಭೀರ ಹಲ್ಲೆ

Pinterest LinkedIn Tumblr

ಕುಂದಾಪುರ: ತನ್ನ ಗೆಳೆಯರನ್ನು ಕಾಣಲು ಲಾಡ್ಜ್ ಬಳಿ ಬಂದಿದ್ದ ಯುವಕನನ್ನು ಸುತ್ತುವರಿದ ಸುಮಾರು ಇಪ್ಪತ್ತಕೂ ಅಧಿಕ ಮಂದಿಯಿದ್ದ ತಂಡ ತಲವಾರು ಹಾಗೂ ಬೈಕ್ ಸ್ಟಮ್ ಮೂಲಕ ಮಾರಣಾಂತಿಕ ದಾಳಿ ನಡೆಸಿದ್ದಲ್ಲದೇ ಆತನ ಚಿನ್ನದ ಚೈನ್ ಸೆಳೆದು ಪರಾರಿಯಾದ ಘಟನೆ ಬುಧವಾರ ತಡರಾತ್ರಿ ತ್ರಾಸಿ ಎಂಬಲ್ಲಿ ನಡೆದಿದೆ.

ನಾಡಾ ನಿವಾಸಿ ಸುದರ್ಶನ ಶೆಟ್ಟಿ ಎನ್ನುವಾತ ಹಲ್ಲೆಗೊಳಗಾದ ಯುವಕ. ಈತ ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದು ಇತ್ತೀಚೆಗಷ್ಟೇ ಊರಿಗೆ ಮರಳಿದ್ದರು. ಗಣೇಶ್ ಕೋತ್ವಾಲ್, ಸುನೀಲ್, ಯತೀಶ್, ಅನಿಲ್ ಸೇರಿದಂತೆ ಇತರರು ಹಲ್ಲೆ ಮಾಡಿದ್ದಾರೆಂದು ಗಂಗೊಳ್ಳಿ ಪೊಲೀಸರಿಗೆ ಯುವಕ ದೂರು ನೀಡಿದ್ದಾನೆ.

ಘಟನೆ ವಿವರ: ಬೆಂಗಳೂರಿನಲ್ಲಿ ನೆಲೆಸಿದ್ದ ಸುದರ್ಶನ್ ಇತ್ತೀಚೆಗೆ ಊರಿಗೆ ಬಂದಿದ್ದು ಆತನ ಗೆಳೆಯರು ಊರಿಗೆ ಬಂದ ಕಾರಣ ತ್ರಾಸಿಯ ವಸತಿಗ್ರಹವೊಂದರಲ್ಲಿ ರೂಂ ಪಡೆದಿದ್ದರು. ಸ್ನೇಹಿತರನ್ನು ಭೇಟಿಯಾಗಲು ಬುಧವಾರದಂದು ರಾತ್ರಿ ತ್ರಾಸಿಗೆ ತೆರಳಿದ್ದಾಗ ತಾನು ಈ ಹಿಂದೆ ಕಲಿಯುತ್ತಿದ್ದ ಕುಂದಾಪುರ ಕಾಲೇಜಿನ ಹಳೆ ವಿದ್ಯಾರ್ಥಿಗಳು ಕೆಲವರ ಸಹಿತ ಇಪ್ಪತ್ತಕ್ಕೂ ಅಧಿಕ ಮಂದಿ ರಿಕ್ಷಾ, ಬೈಕ್ ಹಾಗೂ ಕಾರಿನಲ್ಲಿ ಬಂದು ಪೂರ್ವ ದ್ವೇಷದ ಹಿನ್ನೆಲೆ ತಲವಾರು ಹಾಗೂ ಸ್ಟಮ್ ಮೂಲಕ ಮನಸೋಇಚ್ಚೇ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಸುದರ್ಶನ್ ಎರಡು ಕಾಲುಗಳಿಗೆ, ಕೈ, ಎದೆ ಭಾಗ ಹಾಗೂ ಮೂಗು ಭಾಗಕ್ಕೆ ರಕ್ತ ಗಾಯವಲ್ಲದೇ ದೇಹಕ್ಕೆ ಒಳಪೆಟ್ಟು ಕೂಡ ಆಗಿದೆ.

ಇನ್ನು ಈ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಮೀನಾಮೇಶ ಎಣಿಸುತ್ತಿದ್ದಾರೆಂದು ಹಲ್ಲೆಗೊಳಗಾದ ಯುವಕ ಆರೋಪಿಸಿದ್ದಾನೆ.

Comments are closed.