ಕರಾವಳಿ

ದ.ಕ.ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ನಿಯಂತ್ರಣಕ್ಕೆ ಮೊಬೈಲ್ ಆ್ಯಪ್ : ಜಿಲ್ಲಾಧಿಕಾರಿ

Pinterest LinkedIn Tumblr

ಮಂಗಳೂರು, ಆಗಸ್ಟ್.07 : ಜಿಲ್ಲೆಯಲ್ಲಿ ಗಲಭೆಗೆ ಕಾರಣವಾಗುತ್ತಿರುವ ಅಕ್ರಮ ಗೋಸಾಟ ನಿಯಂತ್ರಣ ಸೇರಿದಂತೆ ಗೋ ಸಾಗಾಟದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮೊಬೈಲ್ ಆ್ಯಪ್ ಸಿದ್ಧಗೊಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು, ದಕ್ಷಿಣ ಕನ್ನಡ ಜಿಲ್ಲಾಡಳಿತ ಮರಳು ಸಾಗಾಟಕ್ಕೆ ಸ್ಯಾಂಡ್ ಬಝಾರ್ ಬಳಿಕ, ಅಕ್ರಮ ಸಾಗಾಟ ತಡೆಗಾಗಿ ಲೈವ್‌ಸ್ಟಾಕ್ ಲಾಜಿಸ್ಟಿಕ್ ಎಂಬ ಕಂಟ್ರೋಲ್ ಆ್ಯಪ್ ರೂಪಿಸಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜಾನುವಾರುಗಳ ಅಧಿಕೃತ ಸಾಗಾಟಕ್ಕೆ ಕಾನೂನಿನ ಸಹಕಾರ ಒದಗಿಸುಲು ಜಿಲ್ಲಾಡಳಿತ ಆ್ಯಪ್ ಸಿದ್ಧಪಡಿಸಿದೆ. ಒಂದೆರಡು ದಿನಗಳಲ್ಲಿ ಗೂಗಲ್ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಕ್ಕೆ ಎಲ್‌ಎಲ್‌ಸಿ (ಲೈವ್‌ಸ್ಟಾಕ್ ಲಾಜಿಸ್ಟಿಕ್ಸ್ ಕಂಟ್ರೋಲ್) ಆ್ಯಪ್ ಎಂದು ಹೆಸರಿಸಲಾಗಿದೆ ಎಂದು ತಿಳಿಸಿದರು.

‘ಎಲ್‌ಎಲ್‌ಸಿ’ ಹೆಸರಿನ ಮೊಬೈಲ್ ಆಧಾರಿತ ಈ ಆಯಪನ್ನು ಗೋ ಸಾಗಾಟಗಾರರು ಡೌನ್‌ಲೋಡ್ ಮಾಡಿಕೊಂಡು ಗೋ ಸಾಗಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಬಹುದು. ಇದು ಇದು ಯಾವುದೇ ರೀತಿಯಲ್ಲಿ ಗೋ ಸಾಗಾಟಕ್ಕೆ ಸಮ್ಮತಿ ಅಲ್ಲ. ಆದರೆ ಸಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಖಾತರಿ ಪಡಿಸಲು ಸಾಗಾಟದಾರರು ನೀಡುವ ಮಾಹಿತಿಯಾಗಿರುತ್ತದೆ.

ಸದ್ಯ ಮಾಹಿತಿಯನ್ನು ನೀಡವುದಕ್ಕಾಗಿ ಮಾತ್ರವೇ ಈ ಆಯಪ್ ಬಳಕೆಯಾಗಲಿದ್ದು, ಮುಂದೆ ಈ ಆಯಪ್‌ನಲ್ಲಿ ಜಿಪಿಎಸ್ ಸಹಾಯದಿಂದ ವಾಹನಗಳ ಸಾಗಾಟದ ಮೇಲೆ ನಿಗಾ ವಹಿಸುವಂತಹ ಇತರ ಸೌಲಭ್ಯಗಳಿಗೂ ಸಹಕಾರಿಯಾಗಲಿದೆ. ಮಾತ್ರವಲ್ಲದೆ, ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳನ್ನು, ಫೋಟೋಗಳನ್ನು ಕೂಡಾ ಇದರಲ್ಲಿ ಅಪ್‌ಲೋಡ್ ಮಾಡುವ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಈಗಾಗಲೇ ಸಾಗಾಟ ಮಾಡುವವರನ್ನು ಕರೆಯಿಸಿ ಮಾತುಕತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕಾನೂನು ರೀತಿಯಲ್ಲಿ ಗೋವುಗಳ ಸಾಗಾಟ ಮಾಡುವವರು ಎಲ್ಲಿಂದ ಎಲ್ಲಿಗೆ, ಯಾರಿಂದ ಗೋವುಗಳನ್ನು ಸಾಗಾಟ ಮಾಡುತ್ತಾರೆ ಎಂಬ ಮಾಹಿತಿಯು ಈ ಆಯಪ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನೆಯಾಗುತ್ತದೆ. ಕಾನೂನು ಬದ್ಧವಾಗಿ ಸಾಗಾಟ ಮಾಡುವವರಿಗೆ ಇದರಿಂದ ಸಹಕಾರಿಯಾಗಲಿದೆ. ಸದ್ಯ ಲಿಂಕ್ ಮೂಲಕ ಸಾಗಾಟಗಾರರಿಗೆ ಈ ಆಯಪ್ ಲಭ್ಯವಾಗಲಿದ್ದು, ಎರಡು ದಿನಗಳಲ್ಲಿ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡುವ ಅವಕಾಶ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿ ಖಾನೆ ಕಂಡು ಬಂದರೆ ಅಧಿಕಾರಿಗಳ ಗಮನಕ್ಕೆ ತರಬೇಕು, ಜಿಲ್ಲಾಡಳಿತದ ನಿಯಂತ್ರಣ ಕೊಠಡಿ (1077) ದಿನದ 24 ಗಂಟೆ ಕಾರ್ಯನಿರತವಾಗಿದೆ. ಅಲ್ಲಿಗೆ ಮಾಹಿತಿ ನೀಡಿದರೆ ಅಧಿಕಾರಿಗಳು ಸ್ಥಳಕ್ಕೆ ಬಂದು ಕ್ರಮ ಜರುಗಿಸುತ್ತಾರೆ. ಪೊಲೀಸ್ ನಿಯಂತ್ರಣ ಕೊಠಡಿಗೂ(100) ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.

ಬಕ್ರೀದ್ ಹಿನ್ನೆಲೆಯಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುವವರು ಮತ್ತು ಅದನ್ನು ತಡೆದು ಕಾನೂನು ಕೈಗೆತ್ತಿಕೊಳ್ಳುವ ಇಬ್ಬರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಬ್ಬದ ಸಂದರ್ಭ ಜಾನುವಾರು ಸಾಗಾಟ ನಡೆಯುತ್ತದೆ. ಅದರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಇದ್ದಾರೆ. ಯಾರಿಗಾದರೂ ಸಂಶಯವಿದ್ದರೆ ಸಹಾಯವಾಣಿ ಸಂಖ್ಯೆ 1077 ಅಥವಾ 100ಕ್ಕೆ ತಿಳಿಸಬಹುದು. ಅದು ಬಿಟ್ಟು ಗುಂಪುಗಟ್ಟಿ ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸಲಾಗದು ಎಂದು ಎಚ್ಚರಿಸಿದರು.

ಬಕ್ರೀದ್ ಹಿನ್ನೆಲೆ : 24 ಗಂಟೆ ಗಸ್ತು ವಾಹನ
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಬಕ್ರೀದ್ ಹಿನ್ನೆಲೆಯಲ್ಲಿ 24 ಗಂಟೆಯೂ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ಏನೇ ದೂರುಗಳಿದ್ದರೂ ತಕ್ಷಣ ಸ್ಪಂದಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದರು.

ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಗೋ ಕಳ್ಳತನದ 6 ಪ್ರಕರಣಗಳು ದಾಖಲಾಗಿದ್ದು, 5 ಪ್ರಕರಣಗಳು ಪತ್ತೆಯಾಗಿವೆ. ಅಕ್ರಮ ಸಾಗಾಟಕ್ಕೆ ಸಂಬಂಧಿಸಿ 19 ಪ್ರಕರಣಗಳು ದಾಖಲಾಗಿದ್ದರೆ, ಗೋ ಹತ್ಯೆಗೆ ಸಂಬಂಧಿಸಿ 12 ಪ್ರಕರಣಗಳು ದಾಖಲಾಗಿವೆ. ಬಕ್ರೀದ್ ಹಿನ್ನೆಲೆಯಲ್ಲಿ ಅಪರಾಧ ಹಿನ್ನೆಲೆಯ 89 ಮಂದಿಯನ್ನು ಕರೆಯಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.

Comments are closed.