ಕರಾವಳಿ

ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಸಾವಿನ ರಹಸ್ಯ ನಿಗೂಢ : ಮರಣೋತ್ತರ ಪರೀಕ್ಷೆಯ ವರದಿಯಲ್ಲೇನಿದೆ?

Pinterest LinkedIn Tumblr

ಮಂಗಳೂರು, ಆಗಸ್ಟ್.03: ಮಂಗಳೂರಿನ ತೊಕ್ಕೊಟ್ಟು ಸಮೀಪದ ನೇತ್ರಾವತಿ ಸೇತುವೆ ಸಮೀಪದಿಂದ ಕಣ್ಮರೆಯಾಗಿ ನಿಗೂಢವಾಗಿ ಸಾವಿಗೀಡಾದ ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ ವಿಜಿ ಸಿದ್ಧಾರ್ಥ ಅವರ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಲಭ್ಯವಾಗಿದೆ.

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರು ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿಯನ್ನು ಪ್ರಕರಣದ ತನಿಖಾಧಿಕಾರಿಗೆ ಶುಕ್ರವಾರ ಸಲ್ಲಿಸಿದ್ದಾರೆ. ಸಿದ್ಧಾರ್ಥ ಅವರು ನದಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ (ಪ್ರೊವಿಷನಲ್ ರಿಪೋರ್ಟ್) ಯಲ್ಲಿ ಕಂಡುಬಂದಿದೆ.

ವರದಿಯಲ್ಲಿ ಸಿದ್ಧಾರ್ಥ ಸಾವಿಗೆ ಬೇರೆ ಕಾರಣವನ್ನು ನಮೂದಿಸಿಲ್ಲ. ಕೇವಲ ನೀರಿಗೆ ಬಿದ್ದು ಉಸಿರುಗಟ್ಟಿ ಸಾವಿಗೀಡಾಗಿರುವುದಾಗಿ ಉಲ್ಲೇಖಿಸಲಾಗಿದೆ. ಆದರೆ ಸಿದ್ಧಾರ್ಥ ಅವರ ದೇಹದ ಯಾವೆಲ್ಲ ಭಾಗಕ್ಕೆ ಏಟಾಗಿತ್ತು ಎಂಬೆಲ್ಲ ಮಾಹಿತಿ ಇದೆ ಎನ್ನಲಾಗಿದೆ. ಆದರೆ ಅಂತಿಮ ವರದಿ ಬಂದ ಮೇಲೆ ಮಾತ್ರವೇ ಸಾವಿಗೆ ನಿಜವಾದ ಕಾರಣ ಏನು ಎಂಬುದು ತಿಳಿಯಲಿದೆ.

ಸಿದ್ಧಾರ್ಥ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಗಿತ್ತು. ಕೆಎಂಸಿ ಆಸ್ಪತ್ರೆಯ ಫೊರೇನ್ಸಿಕ್ ತಜ್ಞ ಡಾ. ಪ್ರತೀಕ್ ರಸ್ತೋಗಿ ಹಾಗೂ ವೆನ್ಲಾಕ್ ಆಸ್ಪತ್ರೆಯ ಫೊರೇನ್ಸಿಕ್ ವಿಭಾಗದ ಡಾ. ಕೆ.ಎಸ್.ರಶ್ಮಿ ನೆರವೇರಿಸಿದ್ದರು.

ಸಿದ್ದಾರ್ಥ್ ಅವರ ಸಾವಿಗೆ ಸ್ಪಷ್ಟ ಕಾರಣ ಅಂತಿಮ ವರದಿಯಲ್ಲಿ ಗೊತ್ತಾಗಲಿದೆ . ಪ್ರಾಥಮಿಕ ವರದಿಯಲ್ಲಿ ಆತ್ಮಹತ್ಯೆಯ ಸಾಧ್ಯತೆ , ಸಿದ್ದಾರ್ಥ ಅವರ ಸಾವು ಹೇಗೆ ಸಂಭವಿಸಿದೆ ಎಂಬುದರ ಬಗ್ಗೆ ಉಲ್ಲೇಖವಿರ ಬಹುದು ಎಂದು ವೆನ್ಲಾಕ್ ಜಿಲ್ಲಾಸ್ಪತ್ರೆ ಅಧೀಕ್ಷಕಿ ರಾಜೇಶ್ವರಿ ದೇವಿ ತಿಳಿಸಿದ್ದಾರೆ. ದಾವಣಗೆರೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಅಂತಿಮ ಹಂತದ ವರದಿ ಸಿದ್ಧಗೊಳ್ಳಲಿದೆ. ಆ ಬಳಿಕವೇ ಸಿದ್ಧಾರ್ಥ ಸಾವು ಕುರಿತಂತೆ ಅಂತಿಮ ವರದಿಯಲ್ಲಿ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲು ಎಸಿಪಿ ಕೋದಂಡರಾಮ ನಿರಾಕರಿಸಿದ್ದಾರೆ. ಪ್ರಾರ್ಥಮಿಕ ಮರಣೋತ್ತರ ಪರೀಕ್ಷೆ ವರದಿ ಮುಚ್ಚಿದ ಲಕೋಟೆಯಲ್ಲಿದ್ದು ಅದನ್ನು ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಹಸ್ತಾಂತರಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಸಕಲೇಶಪುರಕ್ಕೆ ತೆರಳುವುದಾಗಿ ಬೆಂಗಳೂರಿನಿಂದ ಕಾರಿನಲ್ಲಿ ಮಂಗಳೂರಿಗೆ ಬಂದಿದ್ದ ಉದ್ಯಮಿ ಸಿದ್ಧಾರ್ಥ ಜು.29ರಂದು ಸಂಜೆ 7 ಗಂಟೆಯಿಂದ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದರು. ಮರುದಿನ (ಬುಧವಾರ) ಬೆಳಗ್ಗೆ ಅವರ ಶವ ಹೊಯ್ಗೆ ಬಜರ್ ಸಮೀಪ ನದಿ ದಡದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.

ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ವದಂತಿಗಳು ಕಾಣಿಸಿಕೊಂಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹೆಚ್ಚಿನ ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಬಗ್ಗೆ ಆಸ್ಪತ್ರೆ ವೈದ್ಯರನ್ನು ಕೋರಿದ್ದರು. ಅದರಂತೆ ಫೊರೋನ್ಸಿಕ್ ತಜ್ಞರು ಸಿದ್ಧಾರ್ಥ ದೇಹದ ವಿವಿಧ ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಅಲ್ಲಿಂದ ಸುಮಾರು 10 ದಿನದೊಳಗೆ ವರದಿ ಬರುವ ಸಾಧ್ಯತೆ ಇದೆ ಎಂದು ಖಚಿತ ಮೂಲಗಳು ತಿಳಿಸಿವೆ.

ಉದ್ಯಮದಲ್ಲಿ ನಷ್ಟವಾದ ಕಾರಣ, ಸಾಲದ ಒತ್ತಡ ಇದ್ದ ಕಾರಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟದ ತನಿಖೆ ಹೇಳಿದ್ದರೂ, ಅದು ಸಹಜ ಸಾವಲ್ಲ ಎಂಬ ಅನುಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ.

Comments are closed.