ಕರಾವಳಿ

ಮಂಗಳೂರಿನಿಂದ ಚಿಕ್ಕಮಗಳೂರಿಗೆ ಹೊರಟ ಕಾಫಿ ಕಿಂಗ್ ಸಿದ್ದಾರ್ಥ್ ಮೃತದೇಹ

Pinterest LinkedIn Tumblr

ಮಂಗಳೂರು, ಜುಲೈ.31: ಸೋಮವಾರ ಸಂಜೆಯಿಂದ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯ ವಿ.ಜಿ.ಸಿದ್ಧಾರ್ಥ್ ಅವರ ಮೃತದೇಹವು ಹೊಯಿಗೆ ಬಜಾರ್ ಬಳಿಯ ನದಿ ಕಿನಾರೆಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದ್ದು, ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಮೃತದೇಹವನ್ನು ಅವರ ಜನ್ಮಸ್ಥಳ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೇತನ ಹಳ್ಳಿ ಎಸ್ಟೇಟ್‌ಗೆ ಕೊಂಡೊಯ್ಯಲಾಯಿತು.

ಬುಧವಾರ ಬೆಳಗ್ಗೆ ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಆರಂಭಗೊಂಡ ಮರಣೋತ್ತರ ಪರೀಕ್ಷೆಯು 10:30ರ ಸುಮಾರಿಗೆ ಪೂರ್ಣಗೊಂಡಿತು. ಬಳಿಕ ವೆನ್ಲಾಕ್ ಆಸ್ಪತ್ರೆಯಿಂದ ಆಯಂಬುಲೆನ್ಸ್ ಮೂಲಕ ಮೃತದೇಹವನ್ನು 10:48ಕ್ಕೆ ಸಾಗಿಸಲಾಯಿತು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಜನರು ಶವಗಾರದ ಬಳಿ ಸೇರಿದ್ದರು.

ಮೃತದೇಹವನ್ನು ಚಾರ್ಮಾಡಿ ಘಾಟ್ ರಸ್ತೆಯಾಗಿ ಚಿಕ್ಕಮಗಳೂರಿಗೆ ಕೊಂಡೊಯ್ಯಲಾಗುತ್ತಿದೆ. ಎರಡು ಆಯಂಬುಲೆನ್ಸ್‌ಗಳು ಈಗಾಗಲೇ ಚಿಕ್ಕಮಗಳೂರಿನತ್ತ ಹೊರಟಿದ್ದು, ಸುಮಾರು ನಾಲ್ಕೂವರೆ ಗಂಟೆಗಳ ಪಯಣದಲ್ಲಿ ಅಲ್ಲಿ ತಲುಪಲಿದೆ ಎಂದು ಹೇಳಲಾಗಿದೆ.

ಗೊಂದಲಕ್ಕೆ ತೆರೆ :
ನೇತ್ರಾವತಿ ಸಮೀಪ ಸೋಮವಾರ ಸಂಜೆಯಿಂದ ಸಿದ್ದಾರ್ಥ ಅವರು ನಿಗೂಢವಾಗಿ ನಾಪತ್ತೆಯಾಗಿದ್ದರು. ಅವರನ್ನು ಅಪಹರಿಸಲಾಗಿತ್ತೇ ಅಥವಾ ಆತ್ಮಹತ್ಯೆಗೆ ಶರಣಾಗಿದ್ದರೇ ಎಂಬಿತ್ಯಾದಿ ಅನುಮಾನಗಳು ವ್ಯಕ್ತವಾಗಿದ್ದವು. ಅಗ್ನಿಶಾಮಕ ದಳ, ಹೋವರ್ ಕ್ರಾಫ್ಟ್ ಎನ್ ಡಿಆರ್ ಎಫ್ ಸತತ ಶೋಧ ಕಾರ್ಯಾಚರಣೆ ನಡೆಸಿದ್ದವು.

ಪೊಲೀಸರು ಕೂಡಾ ಸಿದ್ದಾರ್ಥ ಕಾರು ಚಾಲಕನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಏತನ್ಮಧ್ಯೆ ಕಾಫಿ ಡೇ ಸಂಸ್ಥೆಯನ್ನು ಬಂದ್ ಮಾಡಲಾಗಿತ್ತು. ಇದೀಗ ಇಂದು ಬೆಳಗ್ಗೆ ನೇತ್ರಾವತಿ ನದಿಯ ಹೊಯ್ಗೆ ಬಜಾರ್ ಕಡಲ ತೀರದಲ್ಲಿ ಮೃತದೇಹವನ್ನು ಮೀನುಗಾರರ ಗಮನಕ್ಕೆ ಬಂದಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು.

Comments are closed.