ಕರಾವಳಿ

ಎಸ್‌ಎಂಕೆ ಅಳಿಯ ಸಿದ್ದಾರ್ಥ್‌ ದಿಢೀರ್‍ ನಾಪತ್ತೆ : ಎನ್‌ಡಿ‌‍ಆರ್‌ಎಫ್ ತಂಡದಿಂದ ಮಂಗಳೂರಿನ ನೇತ್ರಾವತಿ ನದಿಯಲ್ಲಿ ಶೋಧ

Pinterest LinkedIn Tumblr

ಮಂಗಳೂರು,ಜುಲೈ,೩೦: ಕೇಂದ್ರದ ಮಾಜಿ ಸಚಿವ, ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಎಸ್.ಎಂ. ಕೃಷ್ಣ ಅವರ ಅಳಿಯ ವಿ.ಜಿ. ಸಿದ್ದಾರ್ಥ್‌ ಅವರು ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆ ಯಾಗಿದ್ದು, ನಿನ್ನೆ ರಾತ್ರಿಯಿಂದ ಆರಂಭಗೊಂಡಿರುವ ಶೋಧ ಕಾರ್ಯ ಇಂದು ಸಂಜೆಯವರೆಗೂ ಮುಂದುವರಿದಿದೆ.

ವಿ.ಜಿ. ಸಿದ್ದಾರ್ಥ್‌ ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು. ಈ ಹಿನ್ನಲೆಯಲ್ಲಿ ಜಪ್ಪಿನ ಮೊಗರು, ಅಳಿವೆ ಬಾಗಿಲು, ಉಳ್ಳಾಲ ಸುತ್ತಮುತ್ತ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. 30ಕ್ಕೂ ಹೆಚ್ಚು ಬೋಟ್‌’ಗಳಲ್ಲಿ 300ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಹುಡುಕಾಟ ನಡೆಯುತ್ತಿದೆ. ಸ್ಥಳಕ್ಕೆ ಎನ್ ಡಿ ಆರ್ ಎಫ್ ತಂಡ ಕೂಡ ಆಗಮಿಸಿದ್ದು ಹುಡುಕಾಟದಲ್ಲಿ ತೊಡಗಿದ್ದಾರೆ. ಶೋಧಕಾರ್ಯಕ್ಕೆ ಭಾರತೀಯ ತಟ ರಕ್ಷಣಾ ಪಡೆಯ ಹೋವರ್ ಕ್ರಾಫ್ಟ್ ಸಹಾಯ ಪಡೆಯಲಾಗಿದೆ.

ಕರಾವಳಿ ರಕ್ಷಣಾ ಪಡೆ ಮತ್ತು ನೌಕಪಡೆಯ ನೆರವಿನ ಜೊತೆಗೆ ಅಗ್ನಿಶಾಮಕ ದಳ, ತಣ್ಣೀರುಬಾವಿಯಿಂದ ಮುಳುಗು ತಜ್ಞರು ಆಗಮಿಸಿದ್ದು ನೇತ್ರಾವತಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ನೇತ್ರಾವತಿ ನದಿ, ಅಳಿವೆ ಬಾಗಿಲು ಸೇರಿದಂತೆ ವಿವಿಧೆಡೆ ಎನ್ ಡಿಆರ್ ಎಫ್, ಅಗ್ನಿಶಾಮಕ ದಳ, ಗೃಹ ರಕ್ಷಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಮುಳುಗು ತಜ್ಞರ ಶೋಧ ಕಾರ್ಯಕ್ಕೆ ಮಳೆ ಅಡ್ಡಿಯಾಗಿದೆ. ಏತನ್ಮಧ್ಯೆ ಸಮುದ್ರದಲ್ಲಿ ಹೋವರ್ ಕ್ರಾಫ್ಟ್ ಶೋಧ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದೆ. ಸತತ ಹುಡುಕಾಟದ ನಡುವೆಯೂ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ವರದಿ ತಿಳಿಸಿದೆ.

ಸ್ಥಳಕ್ಕೆ ಶಾಸಕ ಯು.ಟಿ ಖಾದರ್‌, ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥೀಲ್, ಡಿಸಿಪಿ ಹನುಮಂತ್ ರಾಯ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.