ಕುಂದಾಪುರ: ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ ಶುಕ್ರವಾರ ಇಲ್ಲಿನ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ನವಚಂಡಿ ಹೋಮದಲ್ಲಿ ಪಾಲ್ಗೊಂಡರು.
ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಕೊಲ್ಲೂರು ದೇವಳಕ್ಕೆ 11.30ಕ್ಕೆ ತಮ್ಮ ಧರ್ಮಪತ್ನಿಯೊಂದಿಗೆ ಆಗಮಿಸಿದ ಅವರು ವಸತಿಗೃಹಕ್ಕೆ ತೆರಳಿ ಐದು ನಿಮಿಷಗಳ ಕಾಲ ವಿಶ್ರಾಂತಿ ಪಡೆದು ಬಳಿಕ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡರು. ಪಾರಾಯಣ, ಕಲಶ ಸ್ಥಾಪನೆ, ಪೂಜೆ ಪುನಸ್ಕಾರಗಳು ಗುರುವಾರ ಸಂಜೆಯಿಂದ ದೇವಳದಲ್ಲಿ ಆರಂಭಗೊಂಡಿದ್ದು, ಮತ್ತೆ ಶುಕ್ರವಾರ ಬೆಳಿಗ್ಗೆ ೮ಗಂಟೆಯಿಂದ ಆರಂಭಗೊಂಡು ಮಧ್ಯಾಹ್ನ 12 ಗಂಟೆಯ ತನಕ ನಡೆದ ನವಚಂಡಿ ಹೋಮದ ಪೂರ್ಣಾಹುತಿಯಲ್ಲಿ ಭಾಗವಹಿಸಿದರು. ನಂತರ ದೇವರ ದರ್ಶನ ಪಡೆದು, ದೇವಿ ಸನ್ನಿಧಿಯಲ್ಲಿ ಮಹಾಪೂಜೆಯ ಸಂಕಲ್ಪ ಮಾಡಿ ಪ್ರಸಾದ ಪಡೆದರು. ಬಳಿಕ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ ಅವರನ್ನು ಸನ್ಮಾನಿಸಿದರು.
ಲಂಕಾ ಜನರ ಒಳಿತಿಗೆ, ರಾಜಕೀಯ ಕ್ಷೇತ್ರದಲ್ಲಿ ಯಾವುದೇ ತೊಂದರೆಗಳಾಗಬಾರದು ಮತ್ತು ದೇಶದ ಶ್ರೇಯಸ್ಸಿಗಾಗಿ ಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ ಕೊಲ್ಲೂರು ಮೂಕಂಬಿಕೆ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು. ಕಳೆದ ಬಾರಿ ಬಂದಾಗ ಮನಸ್ಸಲ್ಲಿ ಏನೋ ಪ್ರಾರ್ಥನೆ ಮಾಡಿಕೊಂಡಿರುವೆ ಈಡೇರಿದರೆ ಇನ್ನೊಮ್ಮೆ ಕ್ಷೇತ್ರಕ್ಕೆ ಬಂದು ದೇವಿಯ ದರ್ಶನ ಪಡೆಯುತ್ತೇನೆ ಎಂದು ಹೋಗಿದ್ದರು. ಅಂತೆಯೇ ಶುಕ್ರವಾರ ಮತ್ತೆ ನವಚಂಡಿಹೋಮದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದಿದ್ದಾರೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ನವಚಂಡಿ ಹೋಮ ಮಾಡಿಸಿದರೆ ಒಳಿತಾಗುತ್ತದೆ ಎಂಬ ಕೇರಳದ ಜ್ಯೋತಿಷಿಯೋರ್ವರ ಸಲಹೆಯ ಮೇರೆಗೆ ಲಂಕಾ ಪ್ರಧಾನಿ ಕೊಲ್ಲೂರು ದೇವಳಕ್ಕೆ ಆಗಮಿಸಿ ನವಚಂಡಿ ಹೋಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಧರ್ಮದರ್ಶಿ ವಂಡಬಳ್ಳಿ ಜಯರಾಮ್ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶ್ರೀಲಂಕಾ ಪ್ರಧಾನಿ ಕೊಲ್ಲೂರು ದೇವಸ್ಥಾನ ಭೇಟಿ ಹಿನ್ನೆಲೆ ಜಿಲ್ಲಾಡಳಿತ ಬಿಗು ಬಂದೋಬಸ್ತ್ ಏರ್ಪಸಿದ್ದು ಶುಕ್ರವಾರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ಮೂರು ಗಂಟೆಯ ತನಕ ಭಕ್ತಾಧಿಗಳಿಗೆ ದೇವಸ್ಥಾನ ಪ್ರವೇಶ ನಿಷೇಧಿಸಲಾಗಿತ್ತು. ಹೀಗಾಗಿ ನಸುಕಿನ ಜಾವದಿಂದಲೇ ಭಕ್ತರು ಮೂಕಾಂಬಿಕೆಯ ದರ್ಶನ ಪಡೆದು ವಾಪಾಸ್ಸಾದರು. ಶುಕ್ರವಾರ ಭಕ್ತಾಧಿಗಳಿಗೆ ಪ್ರವೇಶ ನಿಷೇಧದ ಕುರಿತು ಮೂರು ದಿನಗಳ ಹಿಂದೆ ಜಿಲ್ಲಾಡಳಿತ ಸೂಚಿಸಿದ್ದು, ಮಾಹಿತಿ ಕೊರತೆಯಿಂದಾಗಿ ಬಂದ ಅನೇಕ ಭಕ್ತಾಧಿಗಳು ದೇವರ ದರ್ಶನ ಪಡೆಯಲಾಗದೆ ತಾವು ತಂಗಿದ್ದ ವಸತಿಗೃಹದಲ್ಲೇ ಕೂತು ನಿರಾಶರಾದರು. ಕೊಲ್ಲೂರು ದೇವಳದ ವಠಾರದ ರಸ್ತೆಗಳು ವಾಹನಗಳ ಓಡಾಟವಿಲ್ಲದೇ ಬಿಕೋ ಎನ್ನುತ್ತಿದ್ದವು.
ಎರಡು ತಿಂಗಳ ಹಿಂದಷ್ಟೇ ಈಸ್ಟರ್ ದಿನದಂದು ಕೊಲೊಂಬೋದಲ್ಲಿ ನಡೆದ ಬಾಂಬ್ ಸ್ಪೋಟದ ಹಿನ್ನಲೆಯಲ್ಲಿ ಈ ಬಾರಿ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ ಅವರಿಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸಲಾಗಿತ್ತು. ಭದ್ರತೆಯ ದೃಷ್ಠಿಯಿಂದ ಕೊಲ್ಲೂರು ದೇವಳದ ಸುತ್ತಮುತ್ತಲಿರುವ ಅಂಗಡಿ-ಮುಂಗಟ್ಟು, ಹೋಟೇಲ್ಲುಗಳನ್ನು ಮುಚ್ಚುವಂತೆ ಪೊಲೀಸರು ಮುಂಚಿತವಾಗಿಯೇ ಹೇಳಿದ್ದರಿಂದ ಶುಕ್ರವಾರ ಬೆಳಿಗ್ಗಿನಿಂದಲೂ ಅಂಗಡಿ, ಹೊಟೇಲ್ ಮಾಲೀಕರು ತಮ್ಮ ಅಂಗಡಿಗಳ ಬಾಗಿಲುಗಳನ್ನು ತೆರೆಯಲಿಲ್ಲ. ಪ್ರಧಾನಿ ಬರುವ ದಾರಿಯಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಭಾರತೀಯ ಸೇನೆ ಲಂಕಾ ಪ್ರಧಾನಿಯವರಿಗೆ ಭದ್ರತೆ ನೀಡಿದ್ದು, ದೇವಳದ ಸುತ್ತಮುತ್ತಲೂ ನಿಗಾ ವಹಿಸಿತ್ತು.
ಕೊಲೊಂಬೋದಿಂದ ವಿಮಾನದ ಮೂಲಕ ನೇರವಾಗಿ ಬೆಂಗಳೂರಿಗೆ ಬಂದಿರುವ ಲಂಕಾ ಪ್ರಧಾನಿ ಸಿಂಘೆ, ಬೆಂಗಳೂರಿನಿಂದ ವಿಮಾನದ ಮೂಲಕವೇ ಮಂಗಳೂರಿಗೆ ಬಂದಿದ್ದಾರೆ. ಪೂರ್ವ ತಯಾರಿಯಂತೆ ಹೆಲಿಕಾಫ್ಟರ್ ಮೂಲಕ ಬೈಂದೂರು ಸಮೀಪದ ಅರೆಶಿರೂರು ಹೆಲಿಪ್ಯಾಡ್‌ಗೆ ಬಂದಿಳಿಯಬೇಕಿದ್ದ ಅವರು, ಶುಕ್ರವಾರ ಸುರಿದ ಭಾರೀ ಮಳೆಯಿಂದ ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಹೆಲಿಕಾಫ್ಟರ್ ಹಾರಾಟಕ್ಕೆ ಅಧಿಕಾರಿಗಳು ನಿರಾಕರಿಸಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಕರಾವಳಿಯಲ್ಲಿ ಬಾರೀ ಮಾಳೆಯಾಗುತ್ತಿರುವುದರಿಂದ ಹೆಲಿಕಾಫ್ಟರ್ ಹಾರಾಟಕ್ಕೆ ಅಡಚಣೆಯಾದರೆ ಮೊದಲೇ ರಸ್ತೆ ಮಾರ್ಗದ ಸಿದ್ದತೆಯೂ ನಡೆಸಿಕೊಂಡಿದ್ದ ಜಿಲ್ಲಾಡಳಿತ ಲಂಕಾ ಪ್ರಧಾನಿಯವರನ್ನು ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಸುಮಾರು ೧೪೦ಕ್ಕೂ ಅಧಿಕ ಕಿಮಿ ರಸ್ತೆ ಮಾರ್ಗದ ಮೂಲಕ ಬರಮಾಡಿಕೊಂಡಿತು. ಮಳೆ ಸ್ವಲ್ಪ ಕಡಿಮೆಯಾಗಿದ್ದರಿಂದ ದೇವಳದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಮುಗಿಸಿ ಮಧ್ಯಾಹ್ನ ೧೨.೩೦ಕ್ಕೆ ದೇವಸ್ಥಾನದಿಂದ ತೆರಳಿದ ಲಂಕಾ ಪ್ರಧಾನಿ ಸಿಂಘೆ ಅರೆಶಿರೂರು ಹೆಲಿಪ್ಯಾಡ್ ಮೂಲಕವೇ ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಭದ್ರತೆಗಾಗಿ ಲಂಕಾ ಪ್ರಧಾನಿ ಸಿಂಘೆ ಆಗಮಿಸುವ ರಸ್ತೆ ಮಾರ್ಗದುದ್ದಕ್ಕೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಶುಕ್ರವಾರ ನಸುಕಿನ ಜಾವದಿಂದಲೇ ಭಾರೀ ಮಳೆ ಸುರಿದ ಪರಿಣಾಮ ರಸ್ತೆ ಬದಿ ನಿಂತಿದ್ದ ಪೊಲೀಸ್ ಸಿಬ್ಬಂದಿಗಳೆಲ್ಲರೂ ಕೊಡೆ ಹಿಡಿದು ನಿಲ್ಲುವ ಪರಿಸ್ಥಿತಿ ಎದುರಾಯಿತು. ಕೆಲವರು ರೈನ್‌ಕೋಟ್‌ನಲ್ಲೇ ನಿಂತರೆ ಇನ್ನೂ ಕೆಲವರು ಜಿಟಿ ಜಿಟಿ ಮಳೆಯಲ್ಲಿ ನೆನೆದು ಪರದಾಟ ನಡೆಸುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು.
Comments are closed.