ಕರಾವಳಿ

ಬಿಜೈಯಲ್ಲಿ ಗುಡ್ಡ ಕುಸಿದು ರಸ್ತೆಗೆ ಬಿದ್ದ ಬೃಹತ್ ಗಾತ್ರದ ಬಂಡೆಕಲ್ಲು ; ಬೈಕ್ ಸವಾರ ಅಪಾಯದಿಂದ ಪಾರು

Pinterest LinkedIn Tumblr

ಮಂಗಳೂರು, ಜುಲೈ. 22 : ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ನಗರದ ಸರ್ಕಿಟ್‌ ಹೌಸ್‌ ಸಮೀಪದ ಬಿಜೈ ಬಟ್ಟಗುಡ್ಡದಲ್ಲಿ ಗುಡ್ಡ ಕುಸಿದು ರಸ್ತೆಗೆ ಬಿದ್ದ ಪರಿಣಾಮ ಕೆಲಹೊತ್ತು ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂತಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ನಗರದ ಕೆಪಿಟಿ ಸರ್ಕಲ್ ನಿಂದ ಬಿಜೈ ಕೆ‌ಎಸ್‌ಆರ್‌ಟಿಸಿ ಕಡೆಗೆ ಹೋಗುವ ರಸ್ತೆಯಲ್ಲಿರುವ ಸರ್ಕಿಟ್ ಹೌಸ್ ಹಿಂಭಾಗದ ಗುಡ್ಡ ಕುಸಿದು ರಸ್ತೆಗೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಗುಡ್ಡ ಕುಸಿಯುತ್ತಿದ್ದ ಸಂದರ್ಭ ಅದೇ ರಸ್ತೆಯಲ್ಲಿ ಆಯಂಬುಲೆನ್ಸ್ ಒಂದು ಸಂಚರಿಸುತ್ತಿದ್ದು, ಯಾವುದೇ ಹಾನಿಯಾಗಿಲ್ಲ. ಆದರೆ ಈ ವೇಳೆ ಈ ರಸ್ತೆಯಲ್ಲಿ ಸಂಚಾರಿಸುತಿದ್ದ ಬೈಕ್ ಸವಾರನೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಗುಡ್ಡ ಕುಸಿಯುತ್ತಿದ್ದ ವೇಳೆ ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಗುಡ್ಡ ಕುಸಿತದಿಂದ ರಸ್ತೆಯೆಲ್ಲಾ ಕೆಸರುಮಯವಾಗಿದೆ. ಮಣ್ಣಿನೊಂದಿಗೆ ಬೃಹತ್ ಗಾತ್ರದ ಬಂಡೆಕಲ್ಲುಗಳು ಕೂಡಾ ರಸ್ತೆಗೆ ಬಿದ್ದು ಈ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ರಾ.ಹೆ.66ರ ಕದ್ರಿ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಆ ಬಳಿಕ ಜೆಸಿಬಿ ಬಳಸಿ ರಸ್ತೆಗೆ ಬಿದ್ದ ಮಣ್ಣು ತೆರವು ಕಾರ್ಯಚರಣೆ ನಡೆಸಲಾಯಿತು.ಸ್ಥಳಕ್ಕೆ ಆಗಮಿಸಿದ ಕದ್ರಿ ಸಂಚಾರಿ ಪೊಲೀಸರು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡರು.

Comments are closed.