ಕರ್ನಾಟಕ

ಬೆಂಗಳೂರಿಗೆ ಮನ್ಸೂರ್​ ಖಾನ್​ನನ್ನು ಕರೆತಂದ ಇಡಿ ; ಸಂಕಷ್ಟದಲ್ಲಿ ಶಾಸಕ ರೋಷನ್​ ಬೇಗ್​ !

Pinterest LinkedIn Tumblr

ಬೆಂಗಳೂರು: ಐಎಂಎ ಜ್ಯುವೆಲರ್ಸ್​​ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್​​ನನ್ನು ಜಾರಿ ನಿರ್ದೇಶನ ಅಧಿಕಾರಿಗಳು (ಇಡಿ) ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಕರೆತಂದಿದ್ದಾರೆ. ಮನ್ಸೂರ್​ ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಇಡಿ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ.

ಸದ್ಯ, ವೈದ್ಯಕೀಯ ಪರೀಕ್ಷೆಗೆ ಅಧಿಕಾರಿಗಳು ಮನ್ಸೂರ್ ಖಾನ್​​ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಬಳಿಕ ಮನ್ಸೂರ್ ಖಾನ್​ನನ್ನು ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ಕರೆ ತರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಶೀಘ್ರದಲ್ಲೇ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ವೇಳೆ ಶಾಸಕ ರೋಷನ್​ ಬೇಗ್​ ಬಗ್ಗೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

2 ಸಾವಿರ ಕೋಟಿ ರೂ. ವಂಚನೆ ಮಾಡಿ ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮೊಹಮ್ಮದ್​ ಮನ್ಸೂರ್​ ಖಾನ್​ ದೆಹಲಿಯಲ್ಲಿ ಇಡಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ. ತನಗೆ ಆರೋಗ್ಯ ಸರಿಯಿಲ್ಲದ ಕಾರಣ ವಿಶ್ರಾಂತಿ ಪಡೆಯುತ್ತಿದ್ದೆ ಎಂದು ವಿಡಿಯೋ ಮಾಡಿ ಪೊಲೀಸ್​ ಕಮಿಷನರ್​ಗೆ ಕಳುಹಿಸಿದ್ದ ಮನ್ಸೂರ್​ ಖಾನ್,​ ಕಳೆದ ಭಾನುವಾರ 24 ಗಂಟೆಗಳಲ್ಲಿ ಬೆಂಗಳೂರಿಗೆ ವಾಪಾಸ್​ ಆಗುವುದಾಗಿ ತಿಳಿಸಿದ್ದ. ಆದರೆ, ಆತ ಸುಳ್ಳು ಹೇಳಿದ್ದಾನೆಂದು ಗೊತ್ತಾಗುತ್ತಿದ್ದಂತೆ ಎಸ್​ಐಟಿ ಅಧಿಕಾರಿಗಳು ಮತ್ತೆ ಚುರುಕಾಗಿದ್ದರು.

ಗುರುವಾ ತಡರಾತ್ರಿ ದುಬೈನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಮನ್ಸೂರ್​ ಆಗಮಿಸಿದ್ದ. ದೆಹಲಿಗೆ ಬರುತ್ತಿದ್ದಂತೆ ವಶಕ್ಕೆ ಪಡೆಯಲು ಯೋಚಿಸಿದ್ದ ಎಸ್​ಐಟಿಗೂ ಮುನ್ನವೇ ಇಡಿ ಅಧಿಕಾರಿಗಳು ಮನ್ಸೂರ್​ನನ್ನು ವಶಕ್ಕೆ ಪಡೆದಿದ್ದರು. ಮನ್ಸೂರ್ ಭಾರತಕ್ಕೆ ಬರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಎಸ್ಐಟಿಯ ಒಂದು ತಂಡ ದೆಹಲಿ ಏರ್ಪೋರ್ಟ್ ನಲ್ಲಿ ಬೀಡು ಬಿಟ್ಟಿತ್ತು. ಆದರೆ, ಏರ್​ಪೋರ್ಟ್​ನಲ್ಲಿ ಇಮಿಗ್ರೇಷನ್​ ಅಧಿಕಾರಿಗಳು ಎಸ್ಐಟಿ ಬದಲಿಗೆ ಕೇಂದ್ರ ತನಿಖಾ ಸಂಸ್ಥೆ ಇಡಿ ವಶಕ್ಕೆ ಮನ್ಸೂರ್ ಖಾನ್​ನನ್ನು ನೀಡಿದ್ದರು. ಮನ್ಸೂರ್ ಖಾನ್​ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸರ್ಕಾರ ಎಸ್ಐಟಿಗೆ ನೀಡಲಾಗಿತ್ತು. ಇದುವರೆಗೂ 40 ಸಾವಿರಕ್ಕೂ ಹೆಚ್ಚು ದೂರುಗಳು ಮನ್ಸೂರ್​ ಖಾನ್​ ವಿರುದ್ಧ ದಾಖಲಾಗಿವೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಮಹಮ್ಮದ್​ ಮನ್ಸೂರ್​ಗಾಗಿ ಎಸ್​ಐಟಿ ಮತ್ತು ಇಡಿ ತಂಡ ಶೋಧ ನಡೆಸಿತ್ತು. ಮನ್ಸೂರ್​ ಖಾನ್​ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಶಿವಾಜಿನಗರ ಶಾಸಕ ರೋಷನ್​ ಬೇಗ್ ಹೆಸರನ್ನೂ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ 3 ದಿನಗಳ ಹಿಂದೆ ರೋಷನ್​ ಬೇಗ್ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದ ಎಸ್​ಐಟಿ ತಂಡ ವಿಚಾರಣೆ ನಡೆಸಿತ್ತು.

Comments are closed.