ಕರಾವಳಿ

ಮಂಗಳೂರು ಪೊಲೀಸರಿಂದ ನಗರದ ಪಿಜಿಗಳಿಗೆ ಹಠಾತ್ ದಾಳಿ

Pinterest LinkedIn Tumblr

ಮಂಗಳೂರು : ನಗರದಲ್ಲಿ ಹೆಚ್ಚುತ್ತಿರುವ ಗಾಂಜಾ ಮತ್ತಿತರ ಮಾದಕ ದ್ರವ್ಯ ಜಾಲದ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು ಮಂಗಳವಾರ ಬೆಳಗ್ಗೆ ನಗರದಲ್ಲಿರುವ ಹಲವು ಪಿ.ಜಿ.ಗಳಿಗೆ ಹಠಾತ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲ ವಿಸ್ತರಣೆಯಾಗುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿದೆ. ಯುವಜನರ ಭವಿಷ್ಯವನ್ನೇ ಕಿತ್ತುಕೊಳ್ಳುತ್ತಿರುವ ಈ ಪಿಡುಗನ್ನು ಮಟ್ಟ ಹಾಕುವ ಬಗ್ಗೆ ಸಾರ್ವಜನಿಕರು ಇಲಾಖೆಗಳಿಗೆ ಮನವಿ ಮಾಡುತ್ತಲೇ ಇದ್ದಾರೆ.

ಈ ಹಿನ್ನಲೆಯಲ್ಲಿ, ಮಂಗಳೂರಿನ ಸುತ್ತಮುತ್ತ ದಿನದಿಂದ ದಿನಕ್ಕೆ ಅವ್ಯಾಹುತವಾಗಿ ಹೆಚ್ಚುತ್ತಿರುವ ಗಾಂಜಾ ಸೇರಿದಂತೆ ಮತ್ತಿತರ ಮಾದಕ ದ್ರವ್ಯ ಜಾಲದ ವಿರುದ್ಧ ಸಮರ ಸಾರಿರುವ ನಗರ ಪೊಲೀಸ್ ಅಯುಕ್ತರು ಯುವಕರನ್ನೇ ಗುರಿಯಾಗಿಟ್ಟುಕೊಂಡು ಶಾಲಾ ಕಾಲೇಜುಗಳ ಸಮೀಪ ಪಿಜಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಮಾತ್ರವಲ್ಲದೇ ಮಾದಕ ವ್ಯಸನವನ್ನು ನಿಯಂತ್ರಿಸಲು ಇದರ ಹಿಂದಿರುವ ಮಾರಾಟದ ಜಾಲವನ್ನು ಪತ್ತೆ ಹಚ್ಚಿ ಮಟ್ಟ ಹಾಕಲು ವಿಶೇಷ ಕ್ರಮಕೈಗೊಳ್ಳುವಂತೆ ನಗರದ ಎಲ್ಲಾ ಠಾಣೆಗಳ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಪೊಲೀಸರು ಮಂಗಳವಾರ ಹಲವು ಪಿ.ಜಿ.ಗಳಿಗೆ ಹಠಾತ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ದಾಳಿಯ ಸಂದರ್ಭ ಯಾವುದೇ ಪಿಜಿಗಳಲ್ಲಿ ಮಾದಕ ದ್ರವ್ಯಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.