ಕುಂದಾಪುರ: ಉಡುಪಿ ಜಿಲ್ಲೆ ಕೋಟ ಸಮೀಪದ ಮಣೂರಿನಲ್ಲಿ ಜ.26 ರಾತ್ರಿ ನಡೆದ ಯತೀಶ್ ಕಾಂಚನ್ ಹಾಗೂ ಭರತ್ ಎನ್ನುವ ಗೆಳೆಯರಿಬ್ಬರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 18 ಮಂದಿ ಆರೋಪಿಗಳ ಪೈಕಿ ಪ್ರಕರಣದ ಆರೋಪಿ ರಾಘವೇಂದ್ರ ಕಾಂಚನ್‌ಗೆ ಶರತ್ತುಬದ್ಧ ಜಾಮೀನು ನೀಡಿ ಕರ್ನಾಟಕದ ಉಚ್ಚ ನ್ಯಾಯಾಲಯ ಆದೇಶಿಸಿದೆ. ನ್ಯಾಯಮೂರ್ತಿಗಳಾದ ಸುನೀಲ್ ದತ್ ಯಾದವ್ ಈ ತೀರ್ಪು ಪ್ರಕಟಿಸಿದ್ದಾರೆ. ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸಿದ ಆರೋಪದಡಿಯಲ್ಲಿ ಬಂಧಿಯಾದ ಪೊಲೀಸ್ ಪೇದೆಯಾಗಿದ್ದ ವಿರೇಂದ್ರ ಆಚಾರ್ಯ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ.

(ರಾಘವೇಂದ್ರ ಕಾಂಚನ್)
ಜೋಡಿ ಕೊಲೆ ಪ್ರಕರಣದಲ್ಲಿ ಜಿಲ್ಲಾಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಒಳಸಂಚು ರೂಪಿಸಿದ ಆರೋಪಿಯಾಗಿ ಐಪಿಸಿ ಕಲಂ 120 ಬಿ ಅಡಿಯಲ್ಲಿ ಬಂಧಿತರಾಗಿದ್ದು ಜಾಮೀನು ಕೋರಿ ಕ್ರಿಮಿನಲ್ ಅರ್ಜಿ 2627/2019 ಸಲ್ಲಿಸಲಾಗಿತ್ತು. ಕಳೆದ ನಾಲ್ಕೈದು ತಿಂಗಳಿನಿಂದಲೂ ರಾಘವೇಂದ್ರ ಕಾಂಚನ್ ಸಹಿತ ಪ್ರಕರಣದ ಒಟ್ಟು 18 ಮಂದಿ ಆರೋಪಿಗಳು ಜೈಲಿನಲ್ಲಿದ್ದರು.

(ಪೊಲೀಸ್ ಪೇದೆಯಾಗಿದ್ದ ವಿರೇಂದ್ರ)
ಪೊಲೀಸ್ ಆಗಿದ್ದ ವಿರೇಂದ್ರನಿಗೆ ಜೈಲು!
ಪೊಲೀಸ್ ಸಿಬ್ಬಂದಿಯಾದ ವಿರೇಂದ್ರ ಆಚಾರ್ಯ ಐಪಿಸಿ ಸೆಕ್ಷನ್ 212 ಅಡಿಯಲ್ಲಿ ಬಂಧಿತನಾಗಿದ್ದು ಜಾಮೀನು ಕೋರಿ 2620/2019 ಕ್ರಿಮಿನಲ್ ಅರ್ಜಿ ಸಲ್ಲಿಕೆಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜವಬ್ದಾರಿಯುತ ಸ್ಥಾನದಲ್ಲಿದ್ದು ಆರೋಪಿಯು ಕೊಲೆಯಂತಹ ಹೀನ ಕೃತ್ಯಕ್ಕೆ ಸಹಕರಿಸಿದ್ದು ಬೇಲಿಯೇ ಎದ್ದು ಹೊಲ ಮೆಂದಂತಾಗಿದೆ ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದು ಆದ್ದರಿಂದ ವಿರೇಂದ್ರ ಆಚಾರ್ಯ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ. ಸದ್ಯ ಪೊಲೀಸ್ ಪೇದೆಯಾದ ವಿರೇಂದ್ರ ಜೈಲು ವಾಸ ಮುಂದುವರಿಸಬೇಕಿದೆ.

2-3 ದಿನದಲ್ಲಿ ಪ್ರಕ್ರಿಯೆ ಪೂರ್ಣ…
ಉಚ್ಚ ನ್ಯಾಯಾಲಯದಿಂದ ಆದೇಶ ಬಂದ ಹಿನ್ನಲೆಯಲ್ಲಿ ಕುಂದಾಪುರ ನ್ಯಾಯಾಲಯದಲ್ಲಿ ಜಾಮೀನು ಪ್ರಕ್ರಿಯೆ ನಡೆಯಬೇಕಿದ್ದು 2-3 ದಿನಗಳು ತಗಲುವ ಸಾಧ್ಯತೆಗಳಿದೆ. ಜೆ.ಎಂ.ಎಫ್.ಸಿ ಹಾಗೂ ಸೆಶನ್ಸ್ ನ್ಯಾಯಾಲಯದಲ್ಲಿ ಕುಂದಾಪುರದ ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಈ ಹಿಂದೆಯೂ ವಾದ ಮಂಡಿಸಿದ್ದು ಮುಂದೆಯೂ ಇಲ್ಲಿನ ಜಾಮೀನು ಪ್ರಕ್ರಿಯೆ ಮುಗಿಸಲಿದ್ದಾರೆ. ಅಲ್ಲದೇ ಕಳೆದ ಕೆಲ ದಿನಗಳ ಹಿಂದೆ ರಾಘವೆಂದ್ರ ಕಾಂಚನ್ ಸಹಿತ ಆರೋಪಿಗಳನ್ನು ವಿವಿಧ ಜೈಲುಗಳಿಗೆ ರವಾನಿಸಲು ಕಾರಾಗ್ರಹ ಹೆಚ್ಚುವರಿ ಮಹಾಅಧೀಕ್ಷಕರು ವಿಶೇಷ ಮನವಿ ಮಾಡಿದ್ದಾಗಲೂ ರವಿಕಿರಣ್ ಮುರ್ಡೇಶ್ವರ್ ಅವರು ಸುದೀರ್ಘ ವಾದ ಮಂಡಿಸಿದ್ದರು. ತರುವಾಯ ಅನಾರೋಗ್ಯ ಕಾರಣ ಹಿನ್ನೆಲೆ ರಾಘವೇಂದ್ರ ಕಾಂಚನ್ ಹಾಗೂ ಇನ್ನಿತರ ಆರೋಪಿಗಳಿಗೆ ವಿವಿಧ ಕಾರಣಗಳಿಗಾಗಿ ಹಿರಿಯಡಕ ಜೈಲಿನಲ್ಲೇ ಇರಿಸುವಂತಾಗಿತ್ತು.
(ವರದಿ- ಯೋಗೀಶ್ ಕುಂಭಾಸಿ)
Comments are closed.