ಕರಾವಳಿ

ಪಟ್ಲ ಟ್ರಸ್ಟ್ ಬಳಗದ ಅಮೆರಿಕಾ ಯಾತ್ರೆ ಶುಭಪ್ರದವಾಗಲಿ : ಪುತ್ತಿಗೆಶ್ರೀ

Pinterest LinkedIn Tumblr

ಮಂಗಳೂರು / ಚೆನ್ನೈ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಅಮೇರಿಕಾ ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳುವ ಪಟ್ಲ ಬಳಗದ ಅಮೇರಿಕಾ ಪ್ರವಾಸವು `ಯಾತ್ರೆ’ಯ ಫಲವನ್ನು ನೀಡಿ ಹೊಸ ಅನುಭೂತಿಯನ್ನು ನೀಡಲಿ ಎಂದು ಉಡುಪಿ ಪುತ್ತಿಗೆ ಮಠದ ಹಿರಿಯ ಶ್ರೀಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರು ಶುಭಾಶೀರ್ವಾದಗೈದರು.

ಚೆನ್ನೈಯ ಶ್ರೀಕರಾಂಜನೇಯ ದೇವಸ್ಥಾನದ ಪುತ್ತಿಗೆ ಶಾಖಾ ಮಠದಲ್ಲಿ ಪಟ್ಲ ಬಳಗಕ್ಕೆ ಆಶೀರ್ವಚನ ನೀಡಿದ ಸ್ವಾಮೀಜಿಯವರು ಅಮೇರಿಕಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಬಳಗದ ಸದಸ್ಯರಿಗೆ ಅಮೇರಿಕಾದ ಭೌಗೋಳಿಕ ಪರಿಚಯವನ್ನು ಮಾಡಿದರು. ಶ್ರೀಕೃಷ್ಣ ತತ್ವ ಪ್ರಸಾರ ಕೇಂದ್ರಗಳಾಗಿ ಅಮೇರಿಕಾ ಖಂಡದಲ್ಲಿ ಪುತ್ತಿಗೆ ಶಾಖಾ ಮಠಗಳು ಯಕ್ಷಗಾನಕ್ಕೆ ನೀಡುವ ಪ್ರೋತ್ಸಾಹದ ಹಿನ್ನೆಲೆಯನ್ನು ವಿವರಿಸಿದರು.

ಜೂನ್ 28ಹಾಗೂ 29ಕ್ಕೆ ಅಮೇರಿಕಾದ ನ್ಯೂಜೆರ್ಸಿಯ ಪುತ್ತಿಗೆ ಮಠದ ಶ್ರೀ ಕೃಷ್ಣ ವೃಂದಾವನ ಸಭಾಂಗಣದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ 34ನೇ ಘಟಕ ಉದ್ಘಾಟಿಸಲ್ಪಡಲಿದೆ.

ಅಮೇರಿಕಾ ಖಂಡದ ಎರಡೂವರೆ ತಿಂಗಳ ಯಕ್ಷಗಾನ ಪರ್ಯಟನೆಗೆ ಪುತ್ತಿಗೆ ಶ್ರೀಗಳು ನೀಡುವ ಕಲಾಶ್ರಯ ಹಾಗೂ ಪಟ್ಲಾಶ್ರಯ ಯೋಜನೆಗೆ ಪುತ್ತಿಗೆ ಶ್ರೀಗಳ ಶಿಷ್ಯ ಬಳಗದ ಕೊಡುಗೆಯನ್ನು ಪಟ್ಲ ಸತೀಶ್ ಶೆಟ್ಟಿಯವರು ಸ್ಮರಿಸಿದರು.

ಪುತ್ತಿಗೆ ಮಠದ ನಾಗರಾಜ ಆಚಾರ್ಯ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿಯವರು ಪಟ್ಲ ಬಳಗವನ್ನು ಪರಿಚಯಿಸಿ ಸ್ವಾಮೀಜಿ ಯವರನ್ನು ಅಭಿನಂದಿಸಿದರು.

ಸವಣೂರು ಸೀತಾರಾಮ ರೈ, ಮೂಡಬಿದ್ರೆ ಶ್ರೀಪತಿ ಭಟ್, ಸಿ.ಎ ಸುದೇಶ ಕುಮಾರ್ ರೈ, ಸುಧಾಕರ ಪೂಂಜ ಭಾಸ್ಕರ ರೈ ಕುಕ್ಕುವಳ್ಳಿ ಮೊದಲಾದವರು ಉಪಸ್ಥಿತರಿದ್ದರು. ರವಿಚಂದ್ರ ಶೆಟ್ಟಿ ಅಶೋಕನಗರ ಧನ್ಯವಾದ ಸಮರ್ಪಿಸಿದರು.

Comments are closed.