ಕರಾವಳಿ

ಗೋ ಕಳ್ಳರನ್ನು ಗಡಿಪಾರು ಮಾಡುವಂತೆ ಶಾಸಕ ಭರತ್ ಶೆಟ್ಟಿ ಸೇರಿದಂತೆ ಹಿಂದೂ ಪರ ಸಂಘಟನೆಗಳ ಆಗ್ರಹ

Pinterest LinkedIn Tumblr

ಮಂಗಳೂರು, ಜೂನ್ 25: ಪಣಂಬೂರ್ ಪೊಲೀಸರು ವಶಕ್ಕೆ ಪಡೆದು ಗೋಶಾಲೆಗೆ ಕಳುಹಿಸಿದ್ದ ೨೩ ಗೋವುಗಳನ್ನು ನ್ಯಾಯಾಲಯದ ಆದೇಶದಂತೆ ವಾಪಸ್ ಕೊಂಡು ಹೋಗುವ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಮತ್ತು ಈ ಕುರಿತ ವೀಡಿಯೊವನ್ನು ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಮಾಡಿದ ಬಗ್ಗೆ ಸಂಬಂಧಪಟ್ಟವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಗಳೂರು ಉತ್ತರ ( ಸುರತ್ಕಲ್) ಶಾಸಕ ಡಾ.ವೈ.ಭರತ್ ಶೆಟ್ಟಿ ಸೇರಿದಂತೆ ವಿಹಿಂಪ, ಬಜರಂಗದಳ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಮಂಗಳೂರು ನಗರ ಪೊಲೀಸ್ ಅಯುಕ್ತ ಸಂದೀಪ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಗೋ ಕಳ್ಳತನ ಇಂದು ಬಂಡವಾಳ ಇಲ್ಲದೆ ಹಣ ಗಳಿಸವ ಸುಲಭ ದಾರಿಯಂತಾಗಿದ್ದು ಕಳ್ಳರು ಯಾವುದೇ ಭಯವಿಲ್ಲದೆ ಮಾರಕಾಯುಧಗಳನ್ನು ತೋರಿಸಿ ಹಟ್ಟಿಯಿಂದ ಗೋವನ್ನು ಕದಿಯುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಈ ಹಿನ್ನಲೆಯಲ್ಲಿ ಗೋ ಕಳ್ಳತನ ತಡೆಯಲು ಗೋ ಕಳ್ಳರ ವಿರುದ್ದ ರೌಡಿ ಶೀಟರ್ ಕೇಸು ದಾಖಲಿಸಿ ಅಂಥವರನ್ನು ಗಡಿಪಾರು ಮಾಡುವಂತೆ, ನಗರ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ ಶಾಸಕ ಡಾ.ಭರತ್ ಶೆಟ್ಟಿ ವೈ ಒತ್ತಾಯ ಮಾಡಿದ್ದಾರೆ.

ಮಂಗಳೂರಿನಲ್ಲಿ ಸೋಮವಾರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರನ್ನು ಭೇಟಿಯಾದ ಶಾಸಕ ವೈ.ಭರತ್ ಶೆಟ್ಟಿ ಹಾಗೂ ವಿಹಿಂಪ, ಬಜರಂಗದಳ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರು, ಮಂಗಳೂರು ಸುತ್ತಮುತ್ತ ಅನಧಿಕೃತ ಕಸಾಯಿಖಾನೆಗಳು ಗೋಕಳ್ಳರಿಗೆ ವರದಾನವಾಗಿದ್ದು ಕದ್ದ ದನಗಳನ್ನು ಇಂತಹ ಕಡೆ ವಧಿಸಲಾಗುತ್ತಿದೆ. ಪ್ರಥಮವಾಗಿ ಇಂತಹ ಕಸಾಯಿಖಾನೆಗಳನ್ನು ಗುರುತಿಸಿ ಇದನ್ನು ನಡೆಸುವವರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು.ಈ ನಿಟ್ಟಿನಲ್ಲಿ ಗೋ ಕಳ್ಳತನ ಮಾಡುವವರು ಮತ್ತು ಗೋ ಕಳ್ಳತನಕ್ಕೆ ಬೆಂಬಲ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ಗೋ ಕಳ್ಳರು ಹಾಗೂ ಅವರಿಗೆ ಬೆಂಬಲ ನೀಡುವವರ ವಿರುದ್ಧ ರೌಡಿ ಶೀಟರ್ ಕೇಸ್ ದಾಖಲಿಸಿ ಗಡಿಪಾರು ಮಾಡಬೇಕು ಮನವಿ ಮಾಡಿದರು.

ಪ್ರಮುಖ ಸಂಚಾರ ಕೇಂದ್ರಗಳಲ್ಲಿ ಗುಣಮಟ್ಟದ ಸಿ ಸಿ ಕ್ಯಾಮರಾ ಅಳವಡಿಸಿ ಗೋ ಕಳ್ಳರ ಚಲನವಲನಗಳ ಮೇಲೆ ನಿಗಾ ಇಡಬೇಕು.ಹಸು ವ್ಯಾಪಾರದ ಮಧ್ಯವರ್ತಿಗಳನ್ನು ಕರೆದು ವಿಶೇಷ ಸಭೆ ನಡೆಸಿ ಯಾವುದೇ ದಾಖಲೆ ಇಲ್ಲದ ದನಗಳನ್ನು ಖರೀದಿಸದಂತೆ ಎಚ್ಚರಿಕೆ ನೀಡಬೇಕು.ನಮ್ಮ ಸುತ್ತ ಮುತ್ತ ಇರುವ ದನಗಳ ಬಗ್ಗೆ ಯಾರೋ ಅಪರಿಚಿತ ಏಕಾಏಕಿ ದನವನ್ನು ಕದ್ದು ಕೊಂಡು ಹೋಗಲು ಸಾಧ್ಯವಿಲ್ಲ. ಈ ಬಗ್ಗೆ ಸ್ಥಳೀಯರು ದನಕಳ್ಳರಿಗೆ ಮಾಹಿತಿ ನೀಡುವ ಸಾಧ್ಯತೆ ಇದ್ದು ಅಂತಹವರನ್ನೂ ಗಮನಿಸಿ ಕ್ರಮ ಕೈಗೊಳ್ಳಬೇಕು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಮನೆಯೊಂದರಿಂದ ದನ ಕಳ್ಳತನ ಘಟನೆ ನಡೆದಿರುವುದು ನೋವನ್ನುಂಟು ಮಾಡಿದೆ.ಹೈನುಗಾರಿಕೆ ನಂಬಿ ಜೀವನ ನಡೆಸುವವರು ಇದರಿಂದ ನಷ್ಟಕ್ಕೊಳಗಾಗುತ್ತಿದ್ದಾರೆ. ಸಾಲ ಮಾಡಿ ಉತ್ತಮ ತಳಿಯ ದನ ಖರೀದಿಸಿ ಸ್ವಾವಲಂಬಿ ಜೀವನ ನಡೆಸಲು ಗೋಕಳ್ಳರಿಂದ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಇದನ್ನು ತಡೆದು ರೈತರಿಗೆ ,ಹೈನುಗಾರರಿಗೆ ಭದ್ರತೆಯ ಭರವಸೆ ನೀಡಬೇಕಿದೆ.

ಗೋ ಕಳ್ಳತನದಿಂದ ಒಂದಡೆ ಗೋಸಾಕಾಣೆಯನ್ನೇ ನಂಬಿದವರಿಗೆ ನಷ್ಟವಾಗುತ್ತಿದ್ದರೆ, ಇನ್ನೊಂದೆಡೆ ಧಾರ್ಮಿಕವಾಗಿ ಆರಾಧಿಸುತ್ತಾ ಬರುತ್ತಿರುವ ಹಿಂದೂ ಸಮುದಾಯದ ಭಾವನೆಗೂ ಘಾಸಿಯಾಗುತ್ತಿದೆ. ಮಂಗಳೂರು ಸಹಿತ ದ.ಕ ಜಿಲ್ಲೆಯಲ್ಲಿ ಶಾಂತಿ,ಸೌಹಾರ್ಧತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಠಿಣ ಕಾರ್ಯಾಚರಣೆ ನಡೆಸುವ ಮೂಲಕ ದನಕಳ್ಳರನ್ನು ಮಟ್ಟ ಹಾಕುವ ಸಮಯ ಬಂದಿದೆ.ದನವನ್ನು ಸಾಕಲು ಹಸು ಸಹಿತ ಕೊಳ್ಳುವವರು ಪರವಾನಗಿ ಹಾಗೂ ಪಶು ವೈದ್ಯರಿಂದ ದೃಢೀಕರಣ ಪತ್ರವನ್ನು ಹೊಂದಿರುವುದರ ಬಗ್ಗೆತಪಾಸಣೆ ನಡೆಸಬೇಕು.

ಕೋಮು ಸೌಹಾರ್ಧತೆಯ ದೃಷ್ಟಿಯಿಂದ ಸಂಜೆ 7ರಿಂದ ಬೆಳಗ್ಗೆ 7ರ ತನಕ ಅನುಮತಿ ಪಡೆದ ದನ ಸಾಗಾಟಕ್ಕೂ ನಿಷೇಧ ಹೇರಬೇಕು. ದನಕಳ್ಳತನ ತಡೆಯಲು ವಿಶೇಷ ಪೆಟ್ರೋಲಿಂಗ್ ವ್ಯವಸ್ಥೆ ಜಾರಿಗೆ ತರಬೇಕು.ಜೂ.17ರಂದು ಕೃಷ್ಣಾಪುರದಲ್ಲಿ ದನ ಕಳ್ಳತನ ನಡೆದ ಬಳಿಕ ದೂರುದಾರರ ಮನವಿಗೆ ಕ್ಷಿಪ್ರವಾಗಿ ಸ್ಪಂದಿಸುವ ಮೂಲಕ ಆಯುಕ್ತರಾದ ತಮ್ಮ ಕಾರ್ಯ ಪ್ರಶಂಸನೀಯವಾಗಿದ್ದರೂ ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾಗಬೇಕು ಒತ್ತಾಯಿಸುತ್ತೇವೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಅವರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

Comments are closed.