ಕರಾವಳಿ

ಮಂಗಳೂರಿನಲ್ಲಿ ಭಾರೀ ಮಳೆ : ಕೆಸರುಮಯವಾದ ಪಡೀಲ್‌ ರೈಲ್ವೆ ಅಂಡರ್ ಪಾಸ್ – ವಾಹನ ಸಂಚಾರಕ್ಕೆ ಅಡ್ಡಿ

Pinterest LinkedIn Tumblr

ಮಂಗಳೂರು, ಜೂನ್.13: ದ.ಕ. ಜಿಲ್ಲಾದ್ಯಂತ ಬುಧವಾರ ಬೆಳಗ್ಗೆಯಿಂದಲೇ ಮುಂಗಾರು ಮಳೆ ಧಾರಾಕರವಾಗಿ ಸುರಿಯುತ್ತಿದ್ದು, ಮುಂಗಾರು ಮಳೆ ಬಿರುಸುಗೊಳ್ಳುತ್ತಿದ್ದಂತೆ ಮಂಗಳೂರು ನಗರ ಸೇರಿದಂತೆ ಜಿಲ್ಲಾದ್ಯಂತ ಎಲ್ಲೆಡೆ ಅವ್ಯವಸ್ಥೆ, ಅಪೂರ್ಣ ಕಾಮಗಾರಿ ಗಳಿಂದ ಸಾರ್ವಜನಿಕರು ಸಂಕಷ್ಟಕ್ಕೊಳಗಾಗುವಂತಾಗಿದೆ.

ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ನಗರದ ಪಡೀಲ್‌ನಲ್ಲಿರುವ ರೈಲ್ವೆ ಅಂಡರ್ ಪಾಸ್ ಬಳಿಯು ಇದೇ ರೀತಿಯ ಅವಾಂತರ ಸಂಭವಿಸಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಸಮರ್ಪಕವಾದ ರಸ್ತೆ ಕಾಮಗಾರಿಗಳ ವ್ಯವಸ್ಥೆಯಿಂದಾಗಿ ಮಳೆ ನೀರು ನಡು ರಸ್ತೆಯಲ್ಲಿ ಧಾರಾಕಾರವಾಗಿ ಹರಿಯುತ್ತಿದ್ದು, ನೀರಿನೊಂದಿಗೆ ರಸ್ತೆಪಕ್ಕದಲ್ಲಿ ರಾಶಿ ಹಾಕಲಾಗಿರುವ ಮಣ್ಣು ಕೂಡ ಸೇರಿಕೊಂಡು ಪಡೀಲ್ ರೈಲ್ವೆ ಅಂಡರ್‌ಪಾಸ್ ಸಂಪೂರ್ಣ ಕೆಸರುಮಯವಾಗಿದೆ.

ಪಡೀಲ್ ರೈಲ್ವೇ ಸೇತುವೆಯಲ್ಲಿ ರೈಲು ಹಳಿಗಳ ಇಕ್ಕೆಲಗಳಲ್ಲಿ ಮಣ್ಣು ರಾಶಿ ಹಾಕಲಾಗಿತ್ತು. ಆದರೆ ಅದನ್ನು ಸಮತಟ್ಟುಗೊಳಿಸಿ ಸಮರ್ಪಕ  ವ್ಯವಸ್ಥೆ ಕಲ್ಪಿಸದ ಕಾರಣ ಮಳೆ ನೀರಿನೊಂದಿಗೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಅಂಡರ್ ಪಾಸ್ ಒಳಗಡೆ ಶೇಖರಣೆ ಗೊಂಡಿದೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.

ಈ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಇದೇ ಸಮಸ್ಯೆ ಕಂಡುಬಂದಿದ್ದು, ಇದೀಗ ಅಂಡರ್‌ಪಾಸ್ ಒಳಗಿಂದ ಕೆಸರು ಮಣ್ಣನ್ನು ಜೇಸಿಬಿ ಸಹಾಯದಿಂದ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿ ಪರಿಸ್ಥಿತಿ ಹದೆಗೆಡದಂತೆ ನೋಡಿಕೊಳ್ಳಲ್ಲು ಪೊಲೀಸರನ್ನು ನಿಯೋಜಿಸಲಾಗಿದೆ.

ತೊಕ್ಕೊಟ್ಟು ಫ್ಲೈಓವರ್ ಬಳಿ ರಸ್ತೆಯಲ್ಲೇ ನೀರು

ಇಂದು ಲೋಕಾರ್ಪಣೆಗೊಂಡ ತೊಕ್ಕೊಟ್ಟು ಫ್ಲೈಓವರ್ ಬಳಿ ಇರುವ ಮಂಗಳೂರು-ಕೊಣಾಜೆ ಸಂಪರ್ಕ ರಸ್ತೆಯಲ್ಲಿ ಕೂಡ ಭಾರೀ ಮಳೆ ಕಾರಣ ನೀರು ನಿಂತಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.

Comments are closed.