ಕರಾವಳಿ

ರಾಣಿ ಅಬ್ಬಕ್ಕ ಅಧ್ಯಯನ ಪೀಠಕ್ಕೆ ಪುನಶ್ಚೇತನ : ಪ್ರೊ.ಯಡಪಡಿತ್ತಾಯ

Pinterest LinkedIn Tumblr

ಮಂಗಳೂರು: ‘ರಾಷ್ಟ್ರದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕನ ಗೌರವಾರ್ಥ ಕರ್ನಾಟಕ ಸರಕಾರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಣಿ ಅಬ್ಬಕ್ಕ ಅಧ್ಯಯನ ಪೀಠವನ್ನು ಸ್ಥಾಪಿಸಿದೆ. ಸದ್ಯವೇ ಅದನ್ನು ಪುನಶ್ಚೇತನಗೊಳಿಸಿ ಸಲಹಾ ಸಮಿತಿ ಯೊಂದನ್ನು ರಚಿಸಲಾಗುವುದು’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಹೇಳಿದ್ದಾರೆ.

ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ತನ್ನನ್ನು ಭೇಟಿಯಾದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ (VRANT) ಪದಾಧಿಕಾರಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ‘ಅಬ್ಬಕ್ಕ ಪೀಠವೂ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ಶಾಖೆಗಳ ಕಾರ್ಯಚಟುವಟಿಕೆಗಳಿಗಾಗಿ ಸಂಪನ್ಮೂಲಗಳ ಕ್ರೋಢೀಕರಣ ಆಗಬೇಕಿದೆ. ಮುಂದೆ ಸ್ಥಳೀಯ ಸಂಘಟನೆಗಳ ಸಹಯೋಗದೊಂದಿಗೆ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಲಾಗುವುದು’ ಎಂದವರು ನುಡಿದರು.

ಇದೇ ಸಂದರ್ಭದಲ್ಲಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಶಾಲು,ಸ್ಮರಣಿಕೆ ನೀಡಿ ಕುಲಪತಿಗಳನ್ನು ಅಭಿನಂದಿಸಲಾಯಿತು. ಅಭಿನಂದಿಸಿ ಮಾತನಾಡಿದ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ‘ಸರಕಾರದ ಅನುದಾನದಿಂದ ವರ್ಷಕ್ಕೊಂದಾವರ್ತಿ ಆಗುವ ಅಬ್ಬಕ್ಕ ಉತ್ಸವಕ್ಕೆ ಹೊರತಾಗಿ ಅಬ್ಬಕ್ಕ ರಾಣಿಯ ಬಗೆಗೆ ಶಾಶ್ವತ ಯೋಜನೆಗಳು ಸಿದ್ಧವಾಗಬೇಕು. ವಿಶ್ವವಿದ್ಯಾಲಯ ಮಟ್ಟದಲ್ಲಿ ಅಧ್ಯಯನ ಹಾಗೂ ಸಂಶೋಧನೆಗಳು ನಡೆಯಬೇಕು. ಈ ನಿಟ್ಟಿನಲ್ಲಿ ದೇಶದ ಆಯ್ದ ಭಾಗಗಳಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಏರ್ಪಡಿಸುವ ಪ್ರತಿಷ್ಠಾನದ ಚಿಂತನೆಗೆ ವಿಶ್ವವಿದ್ಯಾನಿಲಯ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಉಪಾಧ್ಯಕ್ಷರಾದ ಕೆ.ತಾರಾನಾಥ ರೈ, ನಮಿತಾ ಶ್ಯಾಮ್, ಸಂಚಾಲಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್, ಕೋಶಾಧಿಕಾರಿ ಪಿ.ಡಿ.ಶೆಟ್ಟಿ, ಕಾರ್ಯದರ್ಶಿಗಳಾದ ತ್ಯಾಗಂ ಮಾಸ್ತರ್, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಸದಸ್ಯರಾದ ತುಕಾರಾಮ್ ಮಾಸ್ತರ್, ಮೋಹನ್ ಕುಮಾರ್, ವಿನುತಾ ನಾಯ್ಕ್, ಸುಮಾ ಪ್ರಸಾದ್ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಪದಾಧಿಕಾರಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಎ.ಎಂ.ಖಾನ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದರು

Comments are closed.