ಕರಾವಳಿ

ಅಡ್ಯಾರ್ ಗಾರ್ಡನ್‌ನಲ್ಲಿ “ಯಕ್ಷಧ್ರುವ ಪಟ್ಲ ಸಂಭ್ರಮ” : ಪಟ್ಲ ಫೌಂಡೇಶನ್ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

Pinterest LinkedIn Tumblr

ಮಂಗಳೂರು, ಜೂನ್.02: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ) ಇದರ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ-2019 ಕಾರ್ಯಕ್ರಮ ಭಾನುವಾರ ಬೆಳಗ್ಗೆ ಅಡ್ಯಾರ್ ಗಾರ್ಡನ್‌ನಲ್ಲಿ ಆರಂಭಗೊಂಡಿತ್ತು.

ಶ್ರೀ ಕ್ಷೇತ್ರ ಮಧೂರಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ ಅವರು ಯಕ್ಷಧ್ರುವ ಪಟ್ಲ ಸಂಭ್ರಮ-2019 ನ್ನು ಉದ್ಘಾಟಿಸಿ ಶುಭಹಾರೈಸಿದರು.

ಶ್ರೀ ಕ್ಷೇತ್ರ ಕಟೀಲಿನ ಅನುವಂಶೀಯ ಅರ್ಚಕ ವೇ.ಮೂ. ಲಕ್ಷ್ಮೀ ನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ಕಲೆಯ ಮೂಲಕ ಜನರಲ್ಲಿ ಧಾರ್ಮಿಕ ಚಿಂತನೆ ಮೂಡಿಸುವುದು, ಸಂಸ್ಕೃತಿ , ಸಂಸ್ಕಾರವನ್ನು ಪ್ರಸಾರ ಮಾಡುವುದು. ಹಿಂದಿನ ಆಚಾರ ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಕಲಾವಿದರು ಸಮಾಜದ ಗುರುಗಳು ಎಂದು ಅವರು ಅಭಿಪ್ರಾಯಪಟ್ಟರು.

ಸಿನೆಮಾ ತಾರೆಯರು ತಮ್ಮ ನಟನಾ ಪ್ರದರ್ಶನದಲ್ಲಿ ಕಟ್, ರೀ ಟೇಕ್‌ಗಳನ್ನು ಮಾಡಬಹುದು. ಆದರೆ ಯಕ್ಷಗಾನ ಕಲಾವಿದರು ಯಾರ ಪ್ರೋತ್ಸಾಹವೂ ಇಲ್ಲದೆ ನಿರಾರ್ಗಳವಾಗಿ ತಮ್ಮ ಪ್ರದರ್ಶನವನ್ನು ನೀಡುತ್ತಾರೆ. ಅಲ್ಪ ವಿದ್ಯೆಯಲ್ಲಿ ದೊಡ್ಡ ವಿದ್ವಾಂಸರೇ ನಾಚುವಂತಹ ಮಾತುಗಾರಿಕೆಯನ್ನು ಕರಗತ ಮಾಡಿಕೊಂಡಿರುತ್ತಾರೆ. ಇಂತಹ ಕಲಾವಿದರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡುವ ಕೆಲಸವನ್ನು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮಾಡುತ್ತಿರುವುದು ಶ್ಲಾಘನೀಯ ಎಂದು ಆಸ್ರಣ್ಣ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಎಜುಕೇಶನ್ ಟ್ರಸ್ಟ್ ನ ಕುಲಾಧಿಪತಿ ಡಾ| ವಿನಯ್ ಹೆಗ್ಡೆ ಅವರು ಮಾತನಾಡಿ, ಕಲಾವಿದರಿಗೆ ಸಮಾಜದಲ್ಲಿ ಉತ್ತಮ ಗೌರವ ಒದಗಿಸುವ ಶ್ರೇಷ್ಠ ಕೆಲಸವನ್ನು ಪಟ್ಲ ಫೌಂಡೇಶನ್ ಮಾಡುತ್ತಿದೆ. ಈ ಕೆಲಸ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಖ್ಯಾತ ಮಕ್ಕಳ ತಜ್ಞ ಡಾ| ಸಂದೀಪ್ ರೈ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಪಟ್ಲ ಪ್ರಶಸ್ತಿ ಪುರಸ್ಕೃತ ಹಿರಿಯ ವಿದ್ವಾಂಸ, ಯಕ್ಷಗಾನ ವಿಮರ್ಶಕ ಡಾ| ಎಂ.ಪ್ರಭಾಕರ ಜೋಷಿ ಅವರ ಕುರಿತಾದ ಯಕ್ಷ ಪ್ರಭಾಕರ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಪೊಳಲಿಯ ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ, ಹಿರಿಯ ಲೆಕ್ಕ ಪರಿಶೋಧಕ ಎಸ್.ಎಸ್.ನಾಯಕ್, ಹೈದರಾಬಾದ್ ಸುಪ್ರಭಾತ ಗ್ರೂಪ್ ಆ ಹೋಟೆಲ್ಸ್‌ನ ಕೃಷ್ಣ ಮೂರ್ತಿ ಮಂಜ, ಧರ್ಮಸ್ಥಳ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಡಾ| ಸತೀಶ್ ಭಂಡಾರಿ, ಲೆಕ್ಕಪರಿಶೋಧಕ ದಿವಾಕರ್ ರಾವ್ ಕಟೀಲು, ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸವಣೂರು ಸೀತಾರಾಮ ರೈ, ಶ್ರೀ ಧನಲಕ್ಷ್ಮೀ ಕ್ಯಾಶ್ಯು ಇಂಡಸ್ಟ್ರೀಸ್ ಶ್ರೀಪತಿ ಭಟ್ ಮೂಡಬಿದಿರೆ, ಪಟ್ಲಗುತ್ತು ಮಹಾಬಲ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಭಾಸ್ಕರ್ ಶೆಟ್ಟಿ, ಅಶೋಕ್ ಶೆಟ್ಟಿ, ಸಚ್ಚಿದಾನಂದ ಶೆಟ್ಟಿ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಹಾಗೂ ಕಾರ್ಯಕ್ರಮದ ರೂವಾರಿ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿದರು. ರವಿರಾಜ್ ಶೆಟ್ಟಿ ವಂದಿಸಿದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments are closed.