ಕರಾವಳಿ

ನಾಳೆ ಅಡ್ಯಾರ್‌ಗಾರ್ಡನ್‌ನಲ್ಲಿ ಪಟ್ಲ ಸಂಭ್ರಮ -2019: ಪ್ರಭಾಕರ ಜೋಷಿಗೆ ಪಟ್ಲ ಪ್ರಶಸ್ತಿ

Pinterest LinkedIn Tumblr

ಮಂಗಳೂರು, ಜೂನ್.01 : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ) ಇದರ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ-2019 ಕಾರ್ಯಕ್ರಮ ಜೂನ್ 2ರಂದು ಭಾನುವಾರ ಬೆಳಗ್ಗೆ 8ಗಂಟೆಯಿಂದ ರಾತ್ರಿ 12ಗಂಟೆಯವರೆಗೆ ಜರಗಲಿದೆ.

ಈ ಬಾರಿ ಹಿರಿಯ ವಿಧ್ವಾಂಸರು, ಯಕ್ಷಗಾನ ವಿಮರ್ಶಕರಾದ ಡಾ. ಎಂ. ಪ್ರಭಾಕರ ಜೋಷಿ ಅವರು ಒಂದು ಲಕ್ಷ ರೂ. ನಗದಿನೊಂದಿಗೆ 2019ರ ಸಾಲಿನ ಪಟ್ಲ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಯಕ್ಷಧ್ರುವ ಕಲಾ ಗೌರವ ಪ್ರಶಸ್ತಿಯನ್ನು ಪೆರುವಾಯಿ ನಾರಾಯಣ ಭಟ್ , ಕಂದಾವರ ರಘುರಾಮಶೆಟ್ಟಿ, ಕೈರಂಗಳ ನಾರಾಯಣ ಹೊಳ್ಳ, ದಯಾಮಣಿ ಎಸ್ ಶೆಟ್ಟಿ ಎಕ್ಕಾರ್, ಬಂಟ್ವಾಳ ಜಯರಾಮ ಆಚಾರ್ಯ, ಐರೋಡಿ ಗೋವಿಂದಪ್ಪ, ವೆಂಕಪ್ಪ ಮಾಸ್ಟರ್ ಅಸೈಗೋಳಿ, ರತ್ನಾ ಕೆ. ಭಟ್ ತಲೆಂಜೇರಿ ಅವರು ಪಡೆಯಲಿದ್ದಾರೆ.

ಡಾ. ಎಂ. ಪ್ರಭಾಕರ ಜೋಷಿ

ಗತ ವರ್ಷದಲ್ಲಿ ವಿಧಿವಶರಾದ ಕಲಾವಿದ ಕುಟುಂಬಗಳಿಗೆ 50 ಸಾವಿರ ಪರಿಹಾರ ಧನ ವಿತರಣೆ, ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ರ್‍ಯಾಂಕ್ ವಿಜೇತರಿಗೆ ಬಂಗಾರದ ಪದಕ, ಅಪಘಾತ ವಿಮಾ ಯೋಜನೆ, ಆರೋಗ್ಯ ವಿಮೆ ನಡೆಯಲಿದೆ. ಕಲಾವಿದರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ವಿತರಣೆ, ಯಕ್ಷಗಾನ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಯಲಿದೆ.

ಸಮಾರಂಭದಲ್ಲಿ ಯಕ್ಷ ಸಪ್ತಸ್ವರ, ತಾಳಮದ್ದಳೆ, ನಾಟ್ಯ ವೈಭವ, ಯಕ್ಷಗಾನ ನೃತ್ಯ ಮತ್ತು ದೇರಾಜೆ ಸೀತಾರಾಮಯ್ಯ ಅವರ `ಕುರುಕ್ಷೇತ್ರಕ್ಕೊಂದು ಆಯೋಗ’ ವಿಶಿಷ್ಟ ಯಕ್ಷರಂಗ ಪ್ರಯೋಗವು ಕದ್ರಿ ನವನೀತ ಶೆಟ್ಟಿ ಅವರ ರಂಗ ಪರಿಕಲ್ಪನೆ ಮತ್ತು ನಿರೂಪಣೆಯಲ್ಲಿ ಪ್ರದರ್ಶನಗೊಳ್ಳಲಿದೆ.

ಸಮಾರಂಭದಲ್ಲಿ ದೇಶ ವಿದೇಶಗಳಿಂದ ಕಲಾಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ)ನ ಸ್ಥಾಪಕಧ್ಯಕ್ಷ ಪಟ್ಳ ಸತೀಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

Comments are closed.