ಮಂಗಳೂರು. ಮೇ.31 : ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ನಾಳೆ 01,06,2019 ಶನಿವಾರದಂದು ಸಂಜೆ 05 ಗಂಟೆಯಿಂದ ವಿಜಯೋತ್ಸವ ಮೆರವಣಿಗೆ ನಡೆಯಲಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಅಭೂತಪೂರ್ವ ಜಯಸಾಧಿಸಿದ ಸಂಭ್ರಮಾಚರಣೆಯ ವಿಜಯೋತ್ಸವ ಹಾಗೂ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಸನ್ಮಾನ್ಯ ನರೇಂದ್ರ ದಾಮೋದರದಾಸ ಮೋದಿಯವರು ಭಾರತದ ಪ್ರಧಾನಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ವಹಿಸಿರುವ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ವಿಜಯೋತ್ಸವದ ಮೆರವಣಿಗೆಯು ತಾ:01.06.2019, ಶನಿವಾರ ಸಾಯಂಕಾಲ ಗಂಟೆ 5ಕ್ಕೆ ಸರಿಯಾಗಿ ಮಂಗಳೂರು ಕುದ್ಮಲ್ ರಂಗರಾವ್ ಪುರಭವನ ದಿಂದ ಹೊರಡಲಿರುವುದು.
ಸಂಜೆ 05:00 ಗಂಟೆಗೆ ಕುದ್ಮಲ್ ರಂಗರಾವ್ ಪುರಭವನದಿಂದ ಮೆರವಣಿಗೆ ಪ್ರಾರಂಭಗೊಂಡು ಕ್ಲಾಕ್ ಟವರ್,ಗಣಪತಿ ಹೈಸ್ಕೂಲ್ ರಸ್ತೆ,ರಥಬೀದಿ,ನ್ಯೂಚಿತ್ರ ಚಿತ್ರಮಂದಿರ,ಗೋಕರ್ಣನಾಥ ಕ್ಷೇತ್ರ ರಸ್ತೆ, ಅಳಕೆ,ಮಣ್ಣಗುಡ್ಡೆ, ದುರ್ಗಾ ಮಹಲ್,ಬಲ್ಲಾಳ್ ಭಾಗ್,ಎಂ.ಜಿ ರಸ್ತೆ,ಬೆಸೆಂಟ್ ಕಾಲೇಜು ಮೂಲಕ ಸಾಗಿ ಪಿ.ವಿ.ಎಸ್ ವೃತ್ತದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮೆರವಣಿಗೆ ಸಮಾಪ್ತಿಗೊಳ್ಳುತ್ತದೆ.
ಮೆರವಣಿಗೆಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್,ಬಿಜೆಪಿ ಜಿಲ್ಲಾಧ್ಯಕ್ಷರೂ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸಂಜೀವ ಮಟಂದೂರು,ಕಾರ್ಕಳ ಶಾಸಕರಾಗಿರುವ ಸುನಿಲ್ ಕುಮಾರ್ ಉಪಸ್ಥಿತರಿರುತ್ತಾರೆ ಎಂದು ಶಾಸಕರು ತಿಳಿಸಿದ್ದಾರೆ.
ವಿಜಯೋತ್ಸವದ ಮೆರವಣಿಗೆಯಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು,ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಾಗಿ ಶಾಸಕರು ಕೇಳಿಕೊಂಡಿದ್ದಾರೆ.
ಅದೇ ರೀತಿ ಮೆರವಣಿಗೆಯುದ್ದಕ್ಕೂ ಸಾರ್ವಜನಿಕರಿಗೆ ಅಡಚಣೆಯಾಗದಂತೆ ಪೋಲಿಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಕಾರ್ಯಕರ್ತರು ಗಮನಹರಿಸಬೇಕೆಂದು ಮಂಗಳೂರು ನಗರ ದಕ್ಷಿಣ ಮಂಡಲ ಅದ್ಯಕ್ಷರು ಮತ್ತು ಶಾಸಕರಾಗಿರುವ ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.
Comments are closed.