ಮಂಗಳೂರು: ಮಾಧ್ಯಮಗಳಲ್ಲಿ ಬರುವ ಆರೋಗ್ಯ ಕ್ಷೇತ್ರದ ಜಾಹೀರಾತುಗಳಿಂದ ಜನರು ದಾರಿ ತಪ್ಪುವ ಸಾಧ್ಯತೆ ಹೆಚ್ಚು. ವೈದ್ಯ ಬರಹಗಾರರು ಲೇಖನಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ ತಪ್ಪು ಮಾಹಿತಿಗಳನ್ನು ಹೋಗಲಾಡಿಸಬೇಕು ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ ಹೇಳಿದರು.
ನಗರದ ಭಾರತೀಯ ವೈದ್ಯಕೀಯ ಸಂಘ ಭವನದಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕದ ವತಿಯಿಂದ ಮಂಗಳೂರು ಶಾಖೆಯ ಆಶ್ರಯದಲ್ಲಿ ಕನ್ನಡ ವೈದ್ಯ ಬರಹಗಾರರ ಬಳಗದ ಸಹಯೋಗದೊಂದಿಗೆ ಆಯೋಜಿಸಿದ್ದ ಕನ್ನಡ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಜನರು ದಿನನಿತ್ಯದ ಜೀವನದ ವಿಚಾರಗಳನ್ನು ವೈದ್ಯರು ಬರೆಯುವುದರಿಂದ ವೈದ್ಯಕೀಯ ಸಾಹಿತ್ಯ ಜನರಿಗೆ ಹತ್ತಿರವಾಗುವ ಸಂಗತಿ. ಅಂತರ್ಜಾಲದ ಪ್ರಭಾವದಿಂದ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಬರಹಗಾರರ ಸಂಖ್ಯೆ ಹೆಚ್ಚುತ್ತಿದೆ. ಕನ್ನಡ ಭಾಷೆ ಬೆಳೆಸುವಲ್ಲಿ ವೈದ್ಯ ಬರಹಗಾರರ ಪಾತ್ರ ಅಪಾರ. ವ್ಯವಹಾರದಲ್ಲಿ ಕನ್ನಡ ಬಳಸಿಕೊಂಡಾಗ ಭಾಷೆ ಉಳಿಯುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮನುಬಳಿಗಾರ್ ಮಾತನಾಡಿ, ಆಂಗ್ಲ ಭಾಷೆ ದಬ್ಬಾಳಿಕೆ, ಹಿಂದಿ ಭಾಷೆಯ ಹೇರಿಕೆಯ ನಡುವೆ ಕನ್ನಡ ಮರೆಯಾಗುವ ಆತಂಕ ಎದುರಿಸುತ್ತಿದೆ. ಈ ಹೆದರಿಕೆ ಕನ್ನಡ ವೈದ್ಯ ಬರಹಗಾರರು ಲೇಖನದ ಮೂಲಕ ಚಿಕಿತ್ಸೆ ಕೊಡಬಲ್ಲರು. ಕನ್ನಡ ಭಾಷೆಯ ಸೌಂದರ್ಯ ವೃದ್ಧಿಯಲ್ಲಿ ವೈದ್ಯರ ಕೊಡುಗೆ ಬಹಳಷ್ಟಿದೆ. ಮನುಷ್ಯನಿಗೆ ಚಿಂತೆಯೇ ದೊಡ್ಡ ರೋಗ. ವೈದ್ಯರನ್ನು ನೋಡಿದ ಕೂಡಲೇ ರೋಗಿಗೆ ಸಮಾಧಾನವಾಗಬೇಕು ಎಂಬುದು ಹಿರಿಯರ ಮಾತು. ಗ್ರಾಮೀಣ ಜನ ವೈದ್ಯರ ಬಗ್ಗೆ ಈಗಲೂ ನಂಬಿಕೆ, ಭಕ್ತಿ ಇಟ್ಟುಕೊಂಡಿದ್ದು ಇದನ್ನು ಉಳಿಸಿಕೊಳ್ಳುವುದು ವೈದ್ಯರ ಕರ್ತವ್ಯ ಎಂದರು.
ವೈದ್ಯ ಬರಹಗಾರರಾದ ಡಾ.ಕರವೀರಪ್ರಭು ಕ್ಯಾಲಕೊಂಡ, ಡಾ.ಕೆ.ಎಸ್. ಶುಭಲತಾ ಅವರಿಗೆ2018ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವೈದ್ಯ ಬರಹಗಾರ ಡಾ.ಎಸ್.ಪಿ.ಯೋಗಣ್ಣ ಮೈಸೂರು ವಹಿಸಿದ್ದರು.
ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಅನ್ನದಾನಿ ಎಂ.ಮೇಟಿ, ಕನ್ನಡ ಸಾಹಿತ್ಯ ಪರಿಷತ್ ದ.ಕ.ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬರಹಗಾರರ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಅಣ್ಣಯ್ಯ ಕುಲಾಲ್ ಎಂ.ಉಳ್ತೂರು, ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಅಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ, ಕಾರ್ಯದರ್ಶಿ ಡಾ.ಎಂ.ಸುಧೀಂದ್ರ ರಾವ್, ಡಾ.ಜಿ.ಕೆ.ಭಟ್ ಸಂಕಬಿತ್ತಿಲು, ಡಾ.ಜೆರೋಮ್ ಪಿಂಟೊ, ಡಾ.ಕೆ.ಆರ್.ಕಾಮತ್, ಡಾ.ಕಸ್ತೂರಿ ಮೋಹನ್ ಪೈ, ಡಾ.ಮಂಜುನಾಥ ಶಣೈ, ಡಾ.ಲಕ್ಷ್ಮಣ ಪ್ರಭು, ಡಾ.ಅಮೃತಾ ಭಂಡಾರಿ, ಡಾ.ಉಲ್ಲಾಸ್ ಶೆಟ್ಟಿ, ಡಾ.ಪ್ರಶಾಂತ್ ಬಿ, ಡಾ.ಅರುಣಾ ಯಡಿಯಾಳ್, ಡಾ.ಆನಂದ್ ಬಂಗೇರಾ, ಡಾ.ಅಶ್ಪಾಕ್ ಮೊಹ್ಮದ್, ಡಾ.ಸಿದ್ಧಾರ್ಥ್ ಶೆಟ್ಟಿ, ಡಾ.ಪೃಥ್ವಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.