ಕುಂದಾಪುರ: ಕಾರಿಗೆ ಅಡ್ಡ ಬಂದ ಹಂದಿಯನ್ನು ತಪ್ಪಿಸಲು ಹೋಗಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೈಂದೂರು-ಕೊಲ್ಲೂರು ರಸ್ತೆಯ ಗೋಳಿಹೊಳೆ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಕಾಲ್ತೋಡು ನಿವಾಸಿಯಾಗಿರುವ ಚಂದ್ರಶೇಖರ್ ಶೆಟ್ಟಿ (53) ಮೃತ ದುರ್ದೈವಿ.
ಕೊಲ್ಲೂರಿನ ಸಮೀಪದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಚಂದ್ರಶೇಖರ್ ಅವರು ತಡರಾತ್ರಿ ಹೋಟೇಲ್ ವ್ಯವಹಾರ ಮುಗಿದ ತರುವಾಯ ಪತ್ನಿ ಮನೆಯಾದ ಕಾಲ್ತೋಡಿಗೆ ತೆರಳುತ್ತಿದ್ದರು. ಈ ವೇಳೆ ಮಾವಿನಕಾರು ಎಂಬಲ್ಲಿ ಕಾರಿಗೆ ಅಡ್ಡವಾಗಿ ಹಂದಿ ಬಂದಿದ್ದಲ್ಲದೇ ಕಾರಿಗೆ ಡಿಕ್ಕಿಯಾಗಿದ್ದು ಕಾರು ನಿಯಂತ್ರಣ ತಪ್ಪಿ ಸಮೀಪದ ಹೊಂಡಕ್ಕಿಳಿದು ಮರಕ್ಕೆ ಡಿಕ್ಕಿಯಾಗಿದೆ. ಅವಘಡದಲ್ಲಿ ಗಂಭೀರವಾಗಿ ತಲೆ ಭಾಗಕ್ಕೆ ಗಾಯಗೊಂಡ ಚಂದ್ರಶೇಖರ್ ಮೃತಪಟ್ಟಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಬೈಂದೂರು ಠಾಣೆ ಪಿಎಸ್ಐ ತಿಮ್ಮೇಶ್ ಬಿ.ಎನ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.