
ಮಂಗಳೂರು, ಮೇ.23: ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಇಂದು ಮುಂಜಾನೆ ಸುರತ್ಕಲ್ ನ ಎನ್‌ಐಟಿಕೆಯಲ್ಲಿ ಆರಂಭಗೊಂಡಿದೆ. ಮತ ಎಣಿಕೆ ಹಿನ್ನೆಲೆ ಕಾಲೇಜು ಆವರಣದ ಸುತ್ತಮುತ್ತ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮತ ಎಣಿಕೆ ಸಂದರ್ಭ ಯಾವೂದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿಎಪಿಎಫ್ ತುಕಡಿ ಸೇರಿ 5 ಕೆಎಸ್ ಆರ್ ಪಿ ತುಕಡಿ, 12 ಸಿಎಆರ್ ತುಕಡಿ, ಇಬ್ಬರು ಡಿಸಿಪಿ, 6 ಮಂದಿ ಎಸಿಪಿ, 17 ಮಂದಿ ಪಿಐ, 48 ಮಂದಿ ಪಿಎಸ್ಐ, 66 ಮಂದಿ ಎಎಸ್ಐ, 112 ಮಂದಿ ಹೆಚ್ಸಿ, 224 ಮಂದಿ ಪೇದೆಗಳನ್ನು ನಿಯೋಜನೆ ಮಾಡಲಾಗಿದೆ.

ಕಾಲೇಜು ಆವರಣಕ್ಕೆ ಆಗಮಿಸುವ ಪಕ್ಷಗಳ ಕಾರ್ಯಕರ್ತರನ್ನು ಹಾಗೂ ಇತರರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಮತ ಎಣಿಕೆಯ ಕೇಂದ್ರ ಸುರತ್ಕಲ್ ಹೆದ್ದಾರಿ ಪಕ್ಕದಲ್ಲೇ ಇರುವುದರಿಂದ ಈಗಾಗಲೇ ಮಂಗಳೂರು-ಉಡುಪಿ ಹೆದ್ದಾರಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಮತ ಎಣಿಕೆಯ ಕೇಂದ್ರ ಸುರತ್ಕಲ್ ಹೆದ್ದಾರಿ ಪಕ್ಕದಲ್ಲೇ ( ಎನ್‌ಐಟಿಕೆ) ಇರುವುದರಿಂದ ಇಂದು ಮುಂಜಾನೆ 7ರಿಂದ ಸಂಜೆಯ ತನಕ ರಸ್ತೆ ಸಂಚಾರ ಬದಲಾವಣೆ ಇರುತ್ತದೆ. ಮಂಗಳೂರಿನಿಂದ ಉಡುಪಿಗೆ ಸಂಚರಿಸುವಂತಹ ಘನ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದ್ದು, ಕಾವೂರು ಜಂಕ್ಷನ್-ಬಜ್ಪೆ-ಕಟೀಲು-ಕಿನ್ನಿಗೋಳಿ ಮಾರ್ಗವಾಗಿ ಸಂಚರಿಸುವಂತೆ ಹಾಗೂ ಇದೇ ಮಾರ್ಗದಲ್ಲಿ ಉಡುಪಿ ಕಡೆಯಿಂದ ಮಂಗಳೂರಿಗೆ ಸಂಚರಿಸುವಂತೆ ಸೂಚಿಸಲಾಗಿದೆ.
ಇನ್ನು ಮಂಗಳೂರು-ಉಡುಪಿ ಸಂಚಾರ ನಡೆಸುವ ಬಸ್ ಗಳು ಎನ್ ಐ ಟಿಕೆ ಬಳಿ ನಿಲ್ಲಿಸುವುದನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ. ಉಡುಪಿಗೆ ಸಂಚರಿಸುವ ಲಘ ವಾಹನಗಳಿಗೆ ಎನ್ ಐ ಟಿಕೆ ಲೈಟ್ ಹೌಸ್-ರೆಡ್ ಕ್ರಾಸ್ ನಲ್ಲಿ ಎಡಕ್ಕೆ ತಿರುಗಿ ಉಡುಪಿಗೆ ಸಂಚರಿಸುವಂತೆ ಸೂಚಿಸಲಾಗಿದೆ. ಇನ್ನು ಉಡುಪಿಯಿಂದ ಮಂಗಳೂರಿಗೆ ಬರುವಂತಹ ಲಘ ವಾಹನಗಳು ಚೇಳ್ಯಾರು ಕ್ರಾಸ್ ನಿಂದ ಎಡಕ್ಕೆ ಬಂದು ಮಧ್ಯ ವೃತ್ತದ ಮೂಲಕ ಮುಂಚೂರು ಕ್ರಾಸ್ ನಲ್ಲಿ ಹೆದ್ದಾರಿಯನ್ನು ಸೇರುವಂತೆ ಸೂಚಿಸಲಾಗಿದೆ.
Comments are closed.