ಕರಾವಳಿ

ಬೈಂದೂರಿನಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿ ಮಹಿಳೆ ಗಂಭೀರ, ಐವರಿಗೆ ಗಾಯ: ಚಿಕಿತ್ಸೆಗೆ ಹಣವಿಲ್ಲದೇ ಪರದಾಟ!

Pinterest LinkedIn Tumblr

ಕುಂದಾಪುರ: ಜಾಗದ ತಕರಾರಿಗೆ ಸಂಬಂಧಿಸಿದಂತೆ ಮನೆಗೆ ನುಗ್ಗಿದ ಎಂಟು ಮಂದಿಯ ತಂಡ ಕತ್ತಿ, ರಾಡು ಹಾಗೂ ದೊಣ್ಣೆಯಿಂದ ಮನೆಮಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಶನಿವಾರ ರಾತ್ರಿ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಗಂಗೆಬೈಲು ಗಾಂಧೀನಗರದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಗಂಗೆಬೈಲು ಗಾಂಧಿನಗರದ ನಿವಾಸಿಗಳಾದ ಶಾರದಾ ದೇವಾಡಿಗ (32) ಗಂಭೀರವಾಗಿ ಗಾಯಗೊಂಡಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಶೀಲಾ (52), ಗಣೇಶ(45), ಮೊನಿಷಾ, ಉಷಾ (52), ಶಾರದಾ(45) ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಡ ಕುಟುಂಬವಿದೀಗಾ ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವಂತಾಗಿದೆ.

ಕಿರಾತಕರಂತೆ ನುಗ್ಗಿದರು!
ಶನಿವಾರ ಕಿರಿಮಂಜೇಶ್ವರ ದೇವಸ್ಥಾನದ ಜಾತ್ರೆಯಿದ್ದು ಆಟೋ ರಿಕ್ಷಾದಲ್ಲಿ ಜಾತ್ರೆ ಮುಗಿಸಿ ಶಾರದಾ ದೀಏವಾಡಿಗ ಮತ್ತು ಕುಟುಂಬಿಕರು ಮನೆಗೆ ವಾಪಾಸ್ ಬಂದಿದ್ದು ರಿಕ್ಷಾ ತಿರುಗಿಸುವ ವೇಳೆ ಕುಪ್ಪು ಖಾರ್ವಿಯವರ ಮನೆಯ ಮೋರಿಗೆ ರಿಕ್ಷಾ ತಾಗಿದ ವಿಚಾರದಲ್ಲಿ ಎರಡು ಮನೆಯವರ ನಡುವೆ ಜಗಳ ನಡೆದಿತ್ತು. ಆ ಸಂಬಂಧ ಶಾರದಾ ಕೂಡಲೇ ಬೈಂದೂರು ಪೊಲೀಸರಿಗೆ ದೂರು ನೀಡಿದ್ದು ಇರಡೂ ಕಡೆಯವರನ್ನು ಮಾರನೇ ದಿನ ಪೊಲೀಸರು ಠಾಣೆಗೆ ಬರುವಂತೆ ಸೂಚಿಸಿದ್ದರು. ಅಂದು ರಾತ್ರಿ 10.30ರ ಸುಮಾರಿಗೆ ಮನೆಗೆ ಬಂದ ಸುಶೀಲಾ, ಹಾಗೂ ಶಾರದಾ ಊಟ ಮಾಡುತ್ತಿದ್ದಾಗ ಉಪ್ಪುಂದ ನಿವಾಸಿಯಾದ ನವೀನಚಂದ್ರ, ಶೋಭಾ, ದಾಮೋದರ, ರತ್ನಾಕರ, ಸತೀಶ, ಶಿವರಾಮ, ಕುಪ್ಪು ಖಾರ್ವಿ ಹಾಗೂ ಮಾದವ ಖಾರ್ವಿ ಮನೆಗೆ ನುಗ್ಗಿ ತಲವಾರ, ದೊಣ್ಣೆ, ಕತ್ತಿಯಿಂದ ಮನೆಯಲ್ಲಿದ್ದವರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಶಾರದಾ ಅವರ ತಲೆ, ಕುತ್ತಿಗೆಗೆ ತೀವ್ರವಾದ ಗಾಯವಾಗಿದೆ. ಜಗಳ ತಪ್ಪಿಸಲು ಬಂದ ಮನೆ ಸಮೀಪದಲ್ಲಿ ವಾಸವಿರುವ ಸಂಬಂಧಿಗಳಾದ ಶಾರದಾ, ಗಣೇಶ, ಉಷಾ ಅವರ ಮೇಲೂ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದೆ. ಗಂಭೀರ ಗಾಯಗೊಂಡ ಶಾರದಾ ಅವರನ್ನು ಸದ್ಯ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೆಂಗಸರ ಮೇಲೆ ಅಮಾನುಷ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಆಕ್ರೋಷ ವ್ಯಕ್ತವಾಗಿದೆ.

ಬೈಂದೂರು ಪಿಎಸ್ಐ ತಿಮ್ಮೇಶ್ ಬಿ.ಎನ್. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಆರೋಪಿತರ ವಿರುದ್ಧ ಕೊಲೆಯತ್ನ ಪ್ರಕರಣ ಸೇರಿದಂತೆ ವಿವಿಧ ಪ್ರಕರಣ ದಾಖಲಾಗಿದೆ.

ಬೈಂದೂರು ಶಾಸಕ ಭೇಟಿ..
ಘಟನೆ ತಿಳಿಯುತ್ತಲೇ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಪ್ರಕರಣದಲ್ಲಿನ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಚಿಕಿತ್ಸೆಗೆ ಹಣವಿಲ್ಲದೆ ಪರದಾಟ..
ಇನ್ನು ಶಾರದಾ ದೇವಾಡಿಗ ಇಡೀ ಮನೆಮಂದಿ ತೀವ್ರತರವಾದ ಹಲ್ಲೆಗೊಳಗಾಗಿ ಆಸ್ಪತ್ರೆ ಪಾಲಾಗಿದ್ದಾರೆ. ದಿನಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬವೀಗ ಆಸ್ಪತ್ರೆ ಚಿಕಿತ್ಸೆ ವೆಚ್ಚ ಭರಿಸಲು ಕೂಡ ಪರದಾಡುವಂತಾಗಿದೆ. ಈ ಬಗ್ಗೆ ದೇವಾಡಿಗ ಸಮಾಜ, ಹಾಗೂ ದಾನಿಗಳು ಮುಂದೆ ಬಂದು ಇವರ ಸಂಕಷ್ಟಕ್ಕೆ ಸಹಕಾರ ನೀಡಬೇಕಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.