ಮಂಗಳೂರು, ಮೇ 15:ನಗರದಲ್ಲಿ ಭೀಭತ್ಸ ರೀತಿಯಲ್ಲಿ ಕೊಲೆಗೈಯಲ್ಪಟ್ಟ ಶ್ರೀಮತಿ ಶೆಟ್ಟಿ ಅವರ ದೇಹದ ಕೆಲವು ಅಂಗಗಳು ನಂತೂರು – ಪದವು ಬಳಿಯ ಶ್ರೀನಿವಾಸ ಮಲ್ಯ ಪಾರ್ಕ್ ನಲ್ಲಿ ಬುಧವಾರ ಪತ್ತೆಯಾಗಿದೆ.
ರವಿವಾರ ತಲೆಯ ಭಾಗ ಸಿಕ್ಕಿರುವ ಸ್ಥಳದಿಂದ ಅನತಿ ದೂರದಲ್ಲಿರುವ ಕದ್ರಿ ಪಾರ್ಕ್ ಹಾಗೂ ನಂತೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಇರುವ ಶ್ರೀನಿವಾಸ ಮಲ್ಯ ಪಾರ್ಕ್ ನಲ್ಲಿ ಎಲೆಗಳ ಮಧ್ಯೆ ಕೈ ಹಾಗೂ ಕಾಲಿನ ಭಾಗಗಳು ಪತ್ತೆಯಾಗಿವೆ.
ಶ್ರೀಮತಿ ಶೆಟ್ಟಿ ಅವರನ್ನು ಭೀಭತ್ಸ ರೀತಿಯಲ್ಲಿ ಕೊಲೆ ಮಾಡಿ ದೇಹವನ್ನು ಕತ್ತರಿಸಿ ತಲೆಭಾಗವನ್ನು ಕದ್ರಿ ಪಾರ್ಕ್ ಬಳಿ ಹಾಗೂ ದೇಹದ ಭಾಗವನ್ನು ನಂದಿಗುಡ್ಡೆಯಲ್ಲಿ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದರು. ರವಿವಾರ ಬೆಳಗ್ಗೆ ಮೃತದೇಹದ ಒಂದು ಭಾಗ ಕದ್ರಿ ಪಾರ್ಕ್ ಬಳಿಯ ಅಂಗಡಿಯೊಂದರ ಆವರಣದಲ್ಲಿ ಗೋಣಿಚೀಲದಲ್ಲಿ ಪತ್ತೆಯಾಗಿದ್ದು, ಇನ್ನೊಂದೆಡೆ ನಂದಿಗುಡ್ಡೆ ಬಳಿ ತಲೆಯ ಅರ್ಧಭಾಗ ಪತ್ತೆಯಾಗಿತ್ತು. ಪೊಲೀಸರು ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಅದು ಕದ್ರಿ ಪಾರ್ಕ್ ಬಳಿಯಲ್ಲಿ ಪತ್ತೆಯಾದ ಮಹಿಳೆಯ ರುಂಡದ ಭಾಗ ಎಂಬುದು ತಿಳಿಯಿತು.
ಕೊಲೆಯ ಭೀಕರತೆ ಯಾವ ರೀತಿ ಇತ್ತು ಎಂದರೆ ದೇಹದ ಭಾಗಗಳನ್ನು ತುಂಡು ತುಂಡಾಗಿ ಕೊಚ್ಚಲಾಗಿತ್ತು. ಎದೆಯ ಭಾಗದ ಚರ್ಮವನ್ನು ಸುಲಿಯಲಾಗಿತ್ತು. ದೇಹವನ್ನು ಕತ್ತರಿಸಿ ಗೋಣಿ ಚೀಲದಲ್ಲಿ ತುಂಬಿಸಲಾಗಿತ್ತು. ತಲೆಯನ್ನು ಹೆಲ್ಮೆಟ್‌ನೊಳಗೆ ತುರುಕಿಸಿ, ಗೋಣಿಚೀಲದಲ್ಲಿ ತುಂಬಿಸಿಡಲಾಗಿತ್ತು. ಕೈಕಾಲು ಹೊರತಾದ ಭಾಗವನ್ನು ನಂದಿಗುಡ್ಡೆ ಬಳಿ ಎಸೆಯಲಾಗಿತ್ತು. ಆದರೆ ಈ ಸಂದರ್ಭ ಕಾಲುಗಳು ಹಾಗೂ ಕೈಗಳು ಪತ್ತೆಯಾಗಿರಲಿಲ್ಲ.
ಇದೇ ವೇಳೆ ಶ್ರೀಮತಿ ಶೆಟ್ಟಿ ಅವರ ಸ್ಕೂಟರ್ ಸೋಮವಾರ ರಾತ್ರಿ ನಾಗುರಿ ಬಳಿ ರಸ್ತೆ ಬದಿ ಅನಾಥವಾಗಿ ಪತ್ತೆಯಾಗಿದೆ. ಈ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಕೊಲೆಯಾದ ಶ್ರೀಮತಿ ಶೆಟ್ಟಿ ಅವರ ಸ್ಕೂಟರ್‌ನಲ್ಲಿದ್ದ ಕೆಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಬಗ್ಗೆ ಕೆಲವು ಸಾಕ್ಷ್ಯಗಳು ಲಭಿಸಿದ್ದು, ನಾಲ್ವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಿಳೆ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಮಿಷನರ್ ಸಂದೀಪ್ ಪಾಟೀಲ್ ಅವರು ತನಿಖೆಗೆ ಮೂರು ತಂಡಗಳನ್ನು (ಕದ್ರಿ ಪೊಲೀಸ್ ಇನ್‌ಸ್ಪೆಕ್ಟರ್ ನೇತೃತ್ವದ ತಂಡ, ಸಿಸಿಬಿ ಪೊಲೀಸರ ತಂಡ ಮತ್ತು ಮಂಗಳೂರು ನಗರ ಕೇಂದ್ರೀಯ ಎಸಿಪಿ ನೇತೃತ್ವದ ತಂಡ) ರಚಿಸಿದ್ದು, ಮೂರೂ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ.