ಕರಾವಳಿ

ಮಂಗಳೂರಿನ ವಿವಿದೆಡೆಗಳಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರುಂಡದ (ಮಹಿಳೆಯ) ಗುರುತು ಪತ್ತೆ

Pinterest LinkedIn Tumblr

ಶ್ರೀಮತಿ ಶೆಟ್ಟಿ

ಮಂಗಳೂರು: ನಗರದ ಕದ್ರಿ ಪಾರ್ಕ್ (ನಂತೂರ್ ಮತ್ತು ಕೆಪಿಟಿಯ ನಡುವಿನ ಹೆದ್ದಾರಿ) ಸಮೀಪ ಹಾಗೂ ನಂದಿಗುಡ್ಡೆ ಬಳಿ ರವಿವಾರ ಬೆಳಗ್ಗೆ ಗೋಣಿ ಚೀಲದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ರುಂಡದ ಭಾಗ ಯಾರದ್ದು ಎಂದು ಗುರುತು ಪತ್ತೆಯಾಗಿದೆ.

ಹತ್ಯೆಗೀಡಾದ ಮಹಿಳೆಯು ಮೂಲತಃ ಪೊಳಲಿ ಮೊಗರಿನವರಾಗಿದ್ದು, ಪ್ರಸ್ತುತ ನಗರದ ಅಮರ್‌ ಆಳ್ವ ರಸ್ತೆ ನಿವಾಸಿಯಾಗಿದ್ದ ಶ್ರೀಮತಿ ಶೆಟ್ಟಿ (35) ಎಂದು ಗುರುತಿಸಲಾಗಿದೆ. ಅವರು ಅತ್ತಾವರದಲ್ಲಿ ಎಲೆಕ್ಟ್ರಿಕಲ್‌ ಉತ್ಪನ್ನಗಳ ದುರಸ್ತಿ ಅಂಗಡಿಯ ಮಾಲಕಿಯಾಗಿದ್ದು, ಕೊಲೆಗೆ ಕಾರಣ ತಿಳಿದುಬಂದಿಲ್ಲ.

ಮಹಿಳೆಯ ದೇಹವು ನಂತೂರ್ ಮತ್ತು ಕೆಪಿಟಿಯ ನಡುವಿನ ಹೆದ್ದಾರಿಯಲ್ಲಿ (ಕದ್ರಿ ಪಾರ್ಕ್ ಬಳಿ) ಒಂದು ಗೋಣಿ ಚೀಲದಲ್ಲಿ ತುಂಬಿ ಇಡಲಾಗಿತ್ತು. ರವಿವಾರ ಕದ್ರಿ ಪಾರ್ಕ್‌ ಬಳಿಯ ಅಂಗಡಿ ಮಾಲಕ ಬಾಗಿಲು ತೆರೆಯಲು ಬಂದಾಗ ಅಂಗಡಿ ಎದುರಲ್ಲಿ ಕಟ್ಟಿರುವ ಸ್ಥಿತಿಯಲ್ಲಿದ್ದ ಗೋಣಿ ಚೀಲವೊಂದು ಪತ್ತೆಯಾಯಿತು. ತೆರೆದು ನೋಡಿದಾಗ ಮಹಿಳೆಯ ತಲೆ ಪತ್ತೆಯಾಗಿದ್ದು, ಕೂಡಲೇ ಕದ್ರಿ ಪೊಲೀಸರಿಗೆ ತಿಳಿಸಿದರು.ಇನ್ನೊಂದೆಡೆ ನಂದಿಗುಡ್ಡೆ ಬಳಿ ತಲೆಯ ಅರ್ಧಭಾಗ ಪತ್ತೆಯಾಗಿತ್ತು. ಪೊಲೀಸರು ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಅದು ಕದ್ರಿ ಪಾರ್ಕ್‌ ಬಳಿಯಲ್ಲಿ ಪತ್ತೆಯಾದ ಮಹಿಳೆಯ ರುಂಡದ ಭಾಗ ಎಂಬುದು ತಿಳಿಯಿತು.

ಕೊಲೆಯ ಭೀಕರತೆ ಯಾವ ರೀತಿ ಇತ್ತು ಎಂದರೆ ದೇಹದ ಭಾಗಗಳನ್ನು ತುಂಡು ತುಂಡಾಗಿ ಕೊಚ್ಚಲಾಗಿತ್ತು. ಎದೆಯ ಭಾಗದ ಚರ್ಮವನ್ನು ಸುಲಿಯಲಾಗಿತ್ತು. ದೇಹವನ್ನು ಕತ್ತರಿಸಿ ಗೋಣಿ ಚೀಲದಲ್ಲಿ ತುಂಬಿಸಲಾಗಿತ್ತು. ತಲೆಯನ್ನು ಹೆಲ್ಮೆಟ್‌ನೊಳಗೆ ತುರುಕಿಸಿ, ಗೋಣಿಚೀಲದಲ್ಲಿ ತುಂಬಿಸಿಡಲಾಗಿತ್ತು. ಕೈಕಾಲು ಹೊರತಾದ ಭಾಗವನ್ನು ನಂದಿಗುಡ್ಡೆ ಬಳಿ ಎಸೆಯಲಾಗಿತ್ತು. ಕಾಲುಗಳು ಹಾಗೂ ಕೈಗಳು ಇನ್ನೂ ಪತ್ತೆಯಾಗಿಲ್ಲ.

ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆಗೈದು ತಲೆ, ದೇಹದ ಭಾಗಗಳನ್ನು ವಿವಿಧೆಡೆ ಎಸೆದಿರುವ ಭೀಭತ್ಸ ಘಟನೆ ಮಂಗಳೂರಿನಲ್ಲಿ ಇದೇ ಪ್ರಥಮ ಬಾರಿಗೆ ನಡೆದಿದೆ. ಪ್ರಾಥಮಿಕ ತನಿಖೆ ಕೊಲೆಯ ಹಿಂದಿನ ಕೆಲವು ವೈಯಕ್ತಿಕ ಕಾರಣಗಳನ್ನು ಸೂಚಿಸುತ್ತದೆ. ಶನಿವಾರ ರಾತ್ರಿ ಘಟನೆ ನಡೆದಿದ್ದು, ರವಿವಾರ ರಾತ್ರಿ ವರೆಗೂ ಆರೋಪಿಯ ಪತ್ತೆಯಾಗಿಲ್ಲ ಮತ್ತು ಕೃತ್ಯಕ್ಕೆ ಕಾರಣವೂ ತಿಳಿದುಬಂದಿಲ್ಲ. ಮಹಿಳೆ ವಿಚ್ಚೇದಿತೆಯಾಗಿದ್ದು, ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೋರ್ವ ಕದ್ರಿ ಪಾರ್ಕ್‌ ಹಿಂಬದಿಯ ಅಂಗಡಿ ಬಳಿ ಹೆಲ್ಮೆಟ್‌ ಇರಿಸಿ ಹೋಗಿರುವ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರಿಂದಾಗಿ ಬೇರೆ ಕಡೆ ಕೊಲೆ ನಡೆಸಿದ ಬಳಿಕ ದೇಹದ ಅಂಗಾಂಗಗಳನ್ನು ಗೋಣಿಯಲ್ಲಿರಿಸಿ ದ್ವಿಚಕ್ರ ವಾಹನದಲ್ಲಿ ತಂದು ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ಕೃತ್ಯದ ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿದೆ. ನಗರದ ಸಿಸಿಕೆಮರಾಗಳನ್ನು ಪರಿಶೀಲಿಸಲಾಗುತ್ತಿದೆ. ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ| ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ಮೊದಲ ಪತಿಯಿಂದ ವಿಚ್ಛೇದನ: ಸೋದರತ್ತೆ (ತಂದೆಯ ಅಕ್ಕ) ಜತೆ ವಾಸಿಸುತ್ತಿದ್ದ ಶ್ರೀಮತಿ ಶೆಟ್ಟಿ 4 ವರ್ಷಗಳ ಹಿಂದೆ ಅಮರ್‌ ಆಳ್ವ ಲೇನ್‌ನಲ್ಲಿ ಸ್ವಂತ ಮನೆ ಕಟ್ಟಿಸಿದ್ದರು. 14 ವರ್ಷಗಳ ಹಿಂದೆ ಮದುವೆಯಾಗಿದ್ದು, ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. 2 ವರ್ಷ ಹಿಂದೆ ದೂರದ ಸಂಬಂಧಿ ಮಡಿಕೇರಿ ಮೂಲದ ಸುದೀಪ್‌ ಅವರನ್ನು 2ನೇ ಮದುವೆ ಯಾಗಿದ್ದರು. ಈ ಮದುವೆಗೆ ಮನೆಯವರ ವಿರೋಧವೂ ಇತ್ತು. ಕೆಲವು ಸಮಯದ ಬಳಿಕ ಆತನ ನಡತೆ ಸರಿಯಿಲ್ಲದ ಕಾರಣ ಆತನಿಂದಲೂ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಸುದೀಪ್‌ ಕಳವು ಪ್ರಕರಣವೊಂದರಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.