ಕರಾವಳಿ

ರೆಡ್‍ಕ್ರಾಸ್‍ನ ಮಾನವೀಯ ಸೇವೆಯಿಂದ ಆತ್ಮ ಸಂತೃಪ್ತಿ : ವಿಶ್ವ ರೆಡ್‍ಕ್ರಾಸ್ ದಿನಾಚರಣೆ ಉದ್ಘಾಟಿಸಿ ಎಂ. ಆರ್ ವಾಸುದೇವ್

Pinterest LinkedIn Tumblr

ಮಂಗಳೂರು : ತುರ್ತು ಅವಘಡ ಸಂದರ್ಭ ತ್ವರಿತ ರೀತಿಯಲ್ಲಿ ಸ್ಪಂದಿಸುವ ರೆಡ್‍ಕ್ರಾಸ್ ಸಂಸ್ಥೆ, ರಕ್ತದಾನ, ವೈದ್ಯಕೀಯ ನೆರವು ಸೇರಿದಂತೆ ನಾನಾ ಮಾನವೀಯ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದು, ಇಂತಹ ಸೇವೆಗಳಿಂದ ಆತ್ಮ ಸಂತೃಪ್ತಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಸಮಾಜ ಪ್ರತಿಯೊಬ್ಬರು ಇಂತಹ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿವೃತ್ತ ನಿರ್ದೇಶಕ ಎಂ.ಆರ್.ವಾಸುದೇವ ರಾವ್ ಹೇಳಿದರು.

ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್‍ನ ಯೂತ್ ರೆಡ್‍ಕ್ರಾಸ್ ಘಟಕದ ವತಿಯಿಂದ ಎ.ಜೆ.ಮೆಡಿಕಲ್ ಕಾಲೇಜಿನ ಆವರಣದಲ್ಲಿ  ನಡೆದ ವಿಶ್ವ ರೆಡ್‍ಕ್ರಾಸ್ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ರೆಡ್‍ಕ್ರಾಸ್ ಸಂಸ್ಥೆ ವಿಶ್ವದಾದ್ಯಂತ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯಾಗಿದೆ. ಪರರ ನೋವಿಗೆ ಮಾನವೀಯ ಸ್ಪಂದನೆ ನೀಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದೆ. ಸಮಾಜದಲ್ಲಿ ಬಹಳಷ್ಟು ಮಂದಿ ಸಹಾಯಕ್ಕಾಗಿ ಎದುರು ನೋಡುತ್ತಿರುತ್ತಾರೆ. ಅಂತವರಿಗೆ ನಾವು ಸೂಕ್ತ ಸಮಯಕ್ಕೆ ಸ್ಪಂದಿಸುವುದು ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದರು.

ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿಯ ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್‍ನ ಪ್ರಿನ್ಸಿಪಾಲ್ ಡಾ. ಲರಿಸ್ಸಾ ಮಾರ್ಥ ಸ್ಯಾಮ್ಸ್, ರೆಡ್‍ಕ್ರಾಸ್ ಸೊಸೈಟಿಯ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ, ರೆಡ್‍ಕ್ರಾಸ್ ಸೊಸೈಟಿಯ ಜಿಲ್ಲಾ ಘಟಕದ ಸದಸ್ಯರಾದ ಬಿ. ರವೀಂದ್ರ ಶೆಟ್ಟಿ, ಯೂಜಿನ್ ರೆಂಟ್, ಕಾರ್ಯಕ್ರಮ ಸಂಯೋಜಕಿ ಶಾಂಭವಿ ಮೊದಲಾದವರು ಉಪಸ್ಥಿತರಿದ್ದರು.

ರೆಡ್‍ಕ್ರಾಸ್ ದಿನಾಚರಣೆ ಅಂಗವಾಗಿ ವೈ ಐ ಲವ್ ರೆಡ್‍ಕ್ರಾಸ್ ಎಂಬ ವಿಷಯದ ಕುರಿತು ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಈ ಸಂದರ್ಭ ಬಹುಮಾನ ವಿತರಿಸಲಾಯಿತು.

ಗೌರವ ಕಾರ್ಯದರ್ಶಿ ಎಸ್.ಎ.ಪ್ರಭಾಕರ ಶರ್ಮ ಸ್ವಾಗತಿಸಿದರು. ಹರ್ಷಿತಾ ಅಮ್ಮಣ್ಣ ಕಾರ್ಯಕ್ರಮ ನಿರೂಪಿಸಿದರು.

Comments are closed.