ಕರಾವಳಿ

ಮಾನಸಿಕ ಸ್ವಾಸ್ಥ್ಯದಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ : ನ್ಯಾ. ಸತ್ಯನಾರಾಯಣಾಚಾರ್ಯ

Pinterest LinkedIn Tumblr

ಮಂಗಳೂರು : ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯದಿಂದ ಇಡೀ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಈ ಹಿನ್ನೆಲೆಯಿಂದ ಜೈಲು ನಿವಾಸಿಗರ ದೈಹಿಕ ಹಾಗೂ ಮಾನಿಸಿಕ ಆರೋಗ್ಯ ತಪಾಸಣೆಯ ಕ್ರಮ ಶ್ಲಾಘನೀಯ ಎಂದು ದ. ಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು.

ಭಾರತೀಯ ರೆಡ್‍ಕ್ರಾಸ್‍ನ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಜಿಲ್ಲಾ ಕಾರಾಗೃಹ, ಜಿಲ್ಲಾ ಸರಕಾರಿ ವೆನ್‍ಲಾಕ್ ಆಸ್ಪತ್ರೆ, ದ. ಕ. ಜಿಲ್ಲಾ ಆರೋಗ್ಯ ಇಲಾಖೆ, ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ದೇರಳಕಟ್ಟೆ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸ ಲಾದ ಜೈಲು ನಿವಾಸಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಜೈಲು ವಾಸ ಅನುಭವಿಸುವವರು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿರಬೇಕು. ಜೈಲಿನಿಂದ ಹೊರಬಂದ ಬಳಿಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಇದು ಬಹಳ ಮುಖ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜೈಲು ಎಂಬುವುದು ಶಿಕ್ಷೆಯ ಕೇಂದ್ರವಾಗಿ ಉಳಿದಿಲ್ಲ. ಅದು ಮನ ಪರಿವರ್ತನೆಯ ಸ್ಥಳವಾಗಿ ಮಾರ್ಪಾಡಾಗಿದೆ. ಮನುಷ್ಯನಿಂದ ತಪ್ಪುಗಳು ಆಗುವುದು ಸಹಜ. ಆದರೆ ಅದನ್ನು ಜೀವನದಲ್ಲಿ ತಿದ್ದಿಕೊಂಡು ಮುಂದೆ ಉತ್ತಮ ಜೀವನ ನಡೆಸಬೇಕು ಎಂದರು.

ರೆಡ್‍ಕ್ರಾಸ್ ದ.ಕ ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ಜೈಲಿನಲ್ಲಿರುವ ನಿವಾಸಿಗರ ಆರೋಗ್ಯದ ಕಾಳಜಿಯನ್ನು ನಾವೆಲ್ಲರೂ ವಹಿಸುತ್ತೇವೆ. ಆದರೆ ಅವರು ತನ್ನ ಜೀವನದಲ್ಲಿ ಸುಧಾರಣೆಯಾಗಿ ಸಾಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಅಪೇಕ್ಷೆ ನಮ್ಮದು. ಜೈಲಿಗೆ ಶುದ್ಧ ಕುಡಿಯುವ ನೀರಿವ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿದರು. ನಿಟ್ಟೆ ವಿಶ್ವವಿದ್ಯಾನಿಲಯದ ವೈಸ್‍ಚಾನ್ಸ್‍ಲರ್ ಹಾಗೂ ರೆಡ್‍ಕರಾಸ್ ಆರೋಗ್ಯ ಮತ್ತು ಪ್ರಥಮ ಚಿಕಿತ್ಸೆ ಸಮಿತಿ ಚೇರ್ಮನ್ ಡಾ. ಸತೀಶ್ ಭಂಡಾರಿ, ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ ಚೇರ್ಮನ್ ಯತೀಶ್ ಬೈಕಂಪಾಡಿ, ಸಾರ್ವಜನಿಕ ಸಂಪರ್ಕ ಸಮಿತಿ ಚೇರ್ಮನ್ ಬಿ. ರವೀಂದ್ರ ಶೆಟ್ಟಿ , ಪ್ರವೀಣ್ ಉಪಸ್ಥಿತರಿದ್ದರು.
ರೆಡ್‍ಕ್ರಾಸ್ ಸಂಸ್ಥೆ ಗೌರವ ಕಾರ್ಯದರ್ಶಿ ಎಸ್. ಎ ಪ್ರಭಾಕರ ಶರ್ಮಾ ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹದ ಸುಪರಿಂಟೆಂಡೆಂಟ್ ಚಂದನ್ ಜೆ. ಪಾಟೇಲ್ ವಂದಿಸಿದರು.

Comments are closed.