ಮಂಗಳೂರು, ಎಪ್ರಿಲ್ 21: ಮಂಗಳೂರು- ಉಳ್ಳಾಲ ರಸ್ತೆಯ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಸಮೀಪ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ.
ತಕ್ಷಣಕ್ಕೆ ಮೃತರ ಬಗ್ಗೆ ವಿವರಗಳು ಲಭ್ಯವಾಗಿಲ್ಲ. ಆದರೆ ಮೃತರು ಬಜಾಲ್ ನಿವಾಸಿ ಎಂದು ಹೇಳಲಾಗಿದೆ.
ಮೃತರು ಚಲಿಸುತ್ತಿದ್ದ ಬೈಕ್ ನೇತ್ರಾವತಿ ಸೇತುವೆಯ ಅನತಿ ದೂರದಲ್ಲಿರುವ ಕಲ್ಲಾಪು ಸಮೀಪದ ಆಡಂಕುದ್ರು ಬಳಿ (ರಾ.ಹೆ. 66) ಸಮೀಪಿಸುತ್ತಿದ್ದಂತೆ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಟ್ರಾಕ್ಟರ್ಗೆ ಢಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆ ಬೈಕ್ ಮಗುಚಿಬಿದ್ದ ಪರಿಣಾಮ ಬೈಕ್ ಸವಾರರು ರಸ್ತೆಗೆಸೆಯಲ್ಪಟ್ಟರು. ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ವೇಗವಾಗಿ ಸಾಗುತ್ತಿದ್ದ ಕೋಳಿ ಸಾಗಾಟದ ವಾಹನವೊಂದು ಬೈಕ್ ಸವಾರರ ದೇಹದ ಮೇಲೆ ಚಲಿಸಿದ ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ಸಂಚಾರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.