ಕರಾವಳಿ

ಮಾಧ್ಯಮದವರೆಲ್ಲಾ ಸೇರಿ ನನಗೆ ಟಾರ್ಚರ್ ಮಾಡುತ್ತಿದ್ದಾರೆ : ಮಾಧ್ಯಮಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ ಕುಮಾರ ಸ್ವಾಮಿ

Pinterest LinkedIn Tumblr

ಮಂಗಳೂರು, ಎಪ್ರಿಲ್.07: ಕಳೆದ ಒಂಬತ್ತು ತಿಂಗಳುಗಳಿಂದ ಮಾಧ್ಯಮದವರೆಲ್ಲಾ ಸೇರಿ ನನಗೆ ಟಾರ್ಚರ್ ಮಾಡುತ್ತಿದ್ದಾರೆ.ಈ ಮಾಧ್ಯಮಗಳಿಗೆ ಎಥಿಕ್ಸ್ ಇದೆಯಾ? ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಮಾಧ್ಯಮಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಚುನಾವಣ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ರವಿವಾರ ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ಮಾಧ್ಯಮಗಳಲ್ಲಿ ನನ್ನ ವಿರುದ್ಧವಾದ ಹೇಳಿಕೆಗಳನ್ನೇ ಪ್ರಸಾರ ಮಾಡಲಾಗುತ್ತದೆ. ನನ್ನನ್ನು ಯಾವ ರೀತಿಯಲ್ಲಿ ಮುಗಿಸಬೇಕೂಂತ ಕೆಲವು ಮಾಧ್ಯಮದವರು ಕಾದು ಕುಳಿತಿದ್ದಾರೆ. ಈ ಮಾಧ್ಯಮಗಳ ವ್ಯವಸ್ಥಾಪಕರಿಗೆ ನನ್ನ ಮೇಲೆ ಯಾಕಿಷ್ಟು ಕೋಪವೋ ಗೊತ್ತಾಗುತ್ತಿಲ್ಲ. ಈ ಒಂಬತ್ತು ತಿಂಗಳಲ್ಲಿ ಇವರೆಲ್ಲಾ ಸೇರಿಗೊಂಡು ಯಾವ ರೀತಿ ಟಾರ್ಚರ್ ಮಾಡುತ್ತಿದ್ದಾರೆ ಎಂಬುದಕ್ಕೆ ಹಳೆಯ ದೃಶ್ಯಾವಳಿಗಳನ್ನು ರಿವೈಂಡ್ ಮಾಡಿಕೊಳ್ಳಲಿ ಎಂದು ಹೇಳಿದರು.

ಇನ್ನು ಮಂಡ್ಯದಲ್ಲಿ ನಿಖಿಲ್ ಪರ ಜನರ ಒಲವು ಕಂಡ ಕೆಲವು ಮಾಧ್ಯಮದ ವ್ಯವಸ್ಥಾಪಕರು ತೀವ್ರ ಒದ್ದಾಡುತ್ತಿದ್ದಾರೆ. ಮಂಡ್ಯದ ಬಗ್ಗೆ ನನ್ನ ಹೇಳಿಕೆ ಪ್ರಸಾರ ಮಾಡುವಾಗಲೂ ನನ್ನ ವಿರೋಧಿಗಳ ದೃಶ್ಯಾವಳಿಗಳು ಬಿತ್ತರವಾಗುತ್ತಿರುತ್ತದೆ. ಮಾಧ್ಯಮಗಳಲ್ಲಿ ಕೇವಲ ಮಂಡ್ಯದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ ಎಂಬಂತೆ ಬಿಂಬಿಸಲಾಗುತ್ತಿದೆ. ನಿಜವಾಗಿಯೂ ಈ ಮಾಧ್ಯಮಗಳಿಗೆ ಎಥಿಕ್ಸೃ ಇದೆಯಾ? ಎಂದು ಪ್ರಶ್ನಿಸಿದರು.

ಈ ವೇಳೆ ಸಚಿವ ಯು.ಟಿ.ಖಾದರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಜೆಡಿಎಸ್ ಮುಖಂಡ ಎಂಬಿ ಸದಾಶಿವ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಪ್ರಮುಖರು ಉಪಸ್ಥಿತರಿದ್ದರು.

Comments are closed.