ಕರಾವಳಿ

ದೂರುದಾರರು/ಕಕ್ಷಿದಾರರನ್ನು ಸಮಾಧಾನ ಪಡಿಸಬಹುದು -ಅದರ ಹಿಂದಿರುವ ಶಕ್ತಿಗಳನ್ನು ಸಾಧ್ಯವಿಲ್ಲ :ಉದಯ ಎಂ.ನಾಯಕ್

Pinterest LinkedIn Tumblr

ಮಂಗಳೂರು : ಇಂದಿನ ದಿನಗಳಲ್ಲಿ ದೂರುದಾರರು ಅಥವಾ ಕಕ್ಷಿದಾರರನ್ನು ಸಮಾಧಾನ ಪಡಿಸುವ ಅಥವಾ ವಸ್ತುಸ್ಥಿತಿ ಮನವರಿಕೆ ಮಾಡಿಕೊಳ್ಳಬಹುದು. ಆದರೆ, ಅದರ ಹಿಂದಿರುವ ಶಕ್ತಿಗಳನ್ನು ಸಮಾಧಾನಪಡಿಸಲು ಸಾಧ್ಯವಿಲ್ಲ ಎಂದು ನಿವೃತ್ತ ಎಸ್ಪಿ ಉದಯ ಎಂ.ನಾಯಕ್ ಹೇಳಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ, ದ.ಕ.ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಕೆಎಸ್‌ಆರ್‌ಪಿ 7ನೆ ಪಡೆ ಮಂಗಳೂರು ಇದರ ವತಿಯಿಂದ ಮಂಗಳವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ-ಕಲ್ಯಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪೊಲೀಸ್ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದ್ರು.

ನಾವು ಪೊಲೀಸ್ ಇಲಾಖೆಯ ಸೇವೆಗೆ ಸೇರಲ್ಪಟ್ಟಾಗ ಪರಿಸ್ಥಿತಿ ಇಷ್ಟೊಂದು ಕಷ್ಟಕರವಾಗಿರಲಿಲ್ಲ. ಆದರೆ, ತಂತ್ರಜ್ಞಾನದಲ್ಲಾದ ಬೆಳವಣಿಗೆಯ ಮಧ್ಯೆ ಪೊಲೀಸ್ ಕೆಲಸವೂ ಕಷ್ಟಕರವಾಗುತ್ತಿದೆ, ಸಂಕೀರ್ಣವಾಗುತ್ತಿದೆ ಎಂದು ಹೇಳಿದರು.

ನಿವೃತ್ತ ಪೊಲೀಸರು ಅಥವಾ ಅಧಿಕಾರಿಗಳು ಕಾರ್ಯನಿಮಿತ್ತ ಠಾಣೆಗಳಿಗೆ ಆಗಮಿಸಿದಾಗ ಸಹಾನುಭೂತಿ ತೋರಿ. ಅವರ ಅಹವಾಲುಗಳನ್ನು ಆಲಿಸಿ. ಗೌರವ ಕೊಟ್ಟು ಉಪಚರಿಸಿ. ಯಾಕೆಂದರೆ ಒಂದಲ್ಲೊಂದು ದಿನ ಎಲ್ಲರೂ ನಿವೃತ್ತರಾಗುವವರಾಗಿದ್ದಾರೆ. ಈಗ ಕರ್ತವ್ಯದಲ್ಲಿರುವವರು ನಿವೃತ್ತರನ್ನು ಆದರಿಂದ ಕಂಡರೆ, ಮುಂದೆಯೂ ಆ ಗೌರವವು ತಮಗೂ ಪ್ರಾಪ್ತಿಯಾಗಬಹುದು. ಇದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು’ ಎಂದು ಉದಯ ನಾಯಕ್ ಹೇಳಿದರು.

ಪಶ್ಚಿಮ ವಲಯ ಐಜಿಪಿ ಜೆ. ಅರುಣ್ ಚಕ್ರವರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಲಕ್ಷ್ಮಿಪ್ರಸಾದ್ ವರದಿ ವಾಚಿಸಿದರು. ಕೆಎಸ್‌ಆರ್‌ಪಿ 7ನೆ ಪಡೆಯ ಕಮಾಂಡೆಂಟ್ ಜನಾರ್ದನ ಆರ್. ಉಪಾಯುಕ್ತರಾದ ಹನುಮಂತರಾಯ, ಉಮಾ ಪ್ರಶಾಂತ್ ಮತ್ತಿತರರು ಪಾಲ್ಗೊಂಡಿದ್ದರು.

ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಗೌರವ ಸಮ್ಮಾನ :

ಕಾರ್ಯಕ್ರಮದಲ್ಲಿ ಕಳೆದೊಂದು ವರ್ಷದಲ್ಲಿ ನಿವೃತ್ತರಾದ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ 31, ಜಿಲ್ಲಾ ಪೊಲೀಸ್ ವ್ಯಾಪ್ತಿಯ 19, ಕೆಎಸ್‌ಆರ್‌ಪಿ ಪಡೆಯ 14 ಹೀಗೆ 64 ಮಂದಿ ಪೊಲೀಸ್ ಅಧಿಕಾರಿ-ಸಿಬ್ಬಂದಿ ವರ್ಗವನ್ನು ಸನ್ಮಾನಿಸಲಾಯಿತು.

Comments are closed.