ಕರಾವಳಿ

ನಂತೂರ್ ಜಂಕ್ಷನ್‌ನಲ್ಲಿ ಪೊಲೀಸ್ ತಪಾಷಣೆ ವೇಳೆ ಸರಣಿ ಅಪಘಾತ : ಸ್ಥಳೀಯರಿಂದ ಆಕ್ರೋಷ

Pinterest LinkedIn Tumblr

ಮಂಗಳೂರು : ನಗರದ ನಂತೂರ್ ಸರ್ಕಲ್‌ನಲ್ಲಿ ಸೋಮವಾರ ರಾತ್ರಿ ಪೊಲೀಸರು ವಾಹನ ತಪಾಷಣೆ ನಡೆಸುತ್ತಿದ್ದ ಸಂದರ್ಭ ಸರಣಿ ಅಪಘಾತ ಸಂಭವಿಸಿದ್ದು, ಮೂರು ವಾಹನಗಳು ಜಖಂಗೊಂಡಿದೆ.

ಚುನಾವಣೆ ಸಂಬಂಧ ನಂತೂರು ಸರ್ಕಲ್ ಬಳಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, ಇಲ್ಲಿ ಸೋಮವಾರ ರಾತ್ರಿ ಪೊಲೀಸರೊಬ್ಬರು ತಪಾಸಣೆಗಾಗಿ ಏಕಾಏಕಿ ಲಾರಿಯೊಂದನ್ನು ನಿಲ್ಲಿಸಿದಾಗ ಅದರ ಹಿಂದೆ ಬರುತ್ತಿದ್ದ ಮೂರು ಕಾರುಗಳು ಒಂದಕ್ಕೊಂದು ಢಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಎರಡು ಕಾರುಗಳಲ್ಲಿದ್ದವರಿಗೆ ಗಾಯಗಳಾಗಿದ್ದು, ಅವರನ್ನು ನಗರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಮಂಗಳೂರು ನಗರದ ಕದ್ರಿ ಸಂಚಾರ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ನಗರದ ಜನನಿಬಿಡ ಪ್ರದೇಶ ನಂತೂರಿನಲ್ಲಿ ಈ ಸರಣಿ ಅಪಘಾತ ಸಂಭವಿಸುತ್ತಿದ್ದಂತೆ ನೂರಾರು ಮಂದಿ ಜಮಾಯಿಸಿ, ಈ ಸರಣಿ ಅಪಘಾತಕ್ಕೆ ಸಂಚಾರ ಪೊಲೀಸ್ ಪೇದೆಯೇ ಕಾರಣ ಎಂದು ಅಕ್ರೋಶ ವ್ಯಕ್ತಪಡಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.

ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜನರನ್ನು ಸ್ಥಳದಿಂದ ತೆರವುಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.

Comments are closed.