ಕರಾವಳಿ

ಎಸ್ಕೇಪ್ ಆಗಿದ್ದ ರೇಪ್&ಮರ್ಡರ್ ಕೇಸ್ ಆರೋಪಿಯನ್ನು ಸಾರ್ವಜನಿಕರ ಸಹಕಾರದಲ್ಲಿ ಬಂಧಿಸಿದ ಪೊಲೀಸರು

Pinterest LinkedIn Tumblr

ಉಡುಪಿ: ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಳ್ಳಿ ಮೂಡಸಗ್ರಿಯಲ್ಲಿ 17 ವರ್ಷದ ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದಡಿ ಬಂಧಿತನಾಗಿ ಭಾನುವಾರ ಸಂಜೆ ಪೊಲೀಸರ ಕೈಯಿಂದ ಪರಾರಿಯಾಗಿದ್ದ ಆರೋಪಿ ಹನುಮಂತ ಬಸಪ್ಪ ಕಂಬಳಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರ ಸಹಾಯದಿಂದ ಪೊಲೀಸರು ಹಿರಿಯಡಕ ಪೊಲೀಸ್ ಠಾಣೆಯ ಪೆರ್ಣಂಕಿಲ ಎಂಬಲ್ಲಿ‌ ಸೋಮವಾರ ಸಂಜೆ ವೇಳೆ ಬಂಧಿಸಲಾಗಿದೆ.

ಕೊಲೆ ಆರೋಪಿಯಾದ ಹನುಮಂತನನ್ನು ಬಂಧಿಸಿ ವಿಚಾರಣಾ ಪ್ರಕ್ರಿಯೆ ನಡೆಸಿದ ಬಳಿಕ ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 14 ದಿಮ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆ ಹಿರಿಯಡ್ಕ ಸಬ್ ಜೈಲಿನತ್ತ ಪೊಲೀಸ್ ಭದ್ರತೆಯಲ್ಲಿ ಕರೆದೊಯ್ಯುವಾಗ ಸಬ್ ಜೈಲು ಬಳಿ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ. ಹಾಡಿಯಲ್ಲಿ ತಪ್ಪಿಸಿಕೊಂಡಿದ್ದ ಆತ ಅಲ್ಲಿಯೇ ಒಬ್ಬ ಕಾರ್ಮಿಕನ ಆಕಾಶ ನೀಲಿ ಬಣ್ಣದ ಟೀ ಶರ್ಟ್ ಕದ್ದು ಧರಿಸಿ ಪರಾರಿಯಾಗಿದ್ದ.

ಮಾಹಿತಿ ನೀಡಿದ ಸ್ಥಳೀಯರು…
ಪೆರ್ಣಂಕಿಲ ಬಳಿ ಮನೆಯೊಂದಕ್ಕೆ ಇಂದು ಸಂಜೆ ಸುಮಾರಿಗೆ ಆರೋಪಿ ನೀರು ಕೇಳಲು ಬಂದಾಗ ಆರೋಪಿ ಚಹರೆ ಗುರುತಿಸಿದ ಸ್ಥಳೀಯರು ಆತನನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ಬಂಧಿಸಿದೆ. ಮಾಹಿತಿ ನೀಡಿದ ವರ್ವಾಡಿ ಕೃಷ್ಣ ಕುಲಾಲ್, ಶ್ರೀಲತಾ, ಪೆರ್ಣಂಕಿಲದ ಪುಷ್ಪಲತಾ, ಹಿರೆಬೆಟ್ಟು ನಿವಾಸಿಗಳಾದ ಕೃಷ್ಣಪ್ರಸಾದ್ ಶೆಟ್ಟಿ, ಯತೀಶ್ ಶೆಟ್ಟಿ, ಶೈಲೇಶ್ ಶೆಟ್ಟಿ ಮೊದಲಾದ ಸಾರ್ವಜನಿಕರ ಸಹಕಾರಕ್ಕೆ ಪೊಲೀಸ್ ತಂಡ ಶ್ಲಾಘನೆ ವ್ಯಕ್ತಪಡಿಸಿದೆ.

ಅಲರ್ಟ್ ಆದ ಉಡುಪಿ ಜಿಲ್ಲಾ ಪೊಲೀಸ್…
ಆರೋಪಿ ಪರಾರಿಯಾಗುತ್ತಲೇ ಇಡೀ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಅಲರ್ಟ್ ಆಗಿತ್ತು.‌ಆರೋಪಿ ಬಂಧನಕ್ಕೆ ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ನೇತೃತ್ವದಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಟಿ. ಜೈಶಂಕರ್, ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ಮಣಿಪಾಲ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್, ಕುಂದಾಪುರ ಸಿಪಿಐ ಮಂಜಪ್ಪ,‌ಬ್ರಹ್ಮಾವರ ಇನ್ಸ್‌ಪೆಕ್ಟರ್ ಪೂವಯ್ಯ, ಡಿಸಿಐಬಿ ಇನ್ಸ್‌ಪೆಕ್ಟರ್ ಕಿರಣ್, ಉಡುಪಿ ಮಹಿಳಾ ಠಾಣೆ ಇನ್ಸ್‌ಪೆಕ್ಟರ್ ಸಂಪತ್ ಕುಮಾರ್, ಸೆನ್ ಠಾಣೆ ಇನ್ಸ್‌ಪೆಕ್ಟರ್ ಸೀತಾರಾಮ್, ಹಿರಿಯಡಕ ಪೊಲೀಸ್ ಠಾಣೆಯ ಪಿಎಸ್ಐ ಸಂತೋಷ್ ಕಾಯ್ಕಿಣಿ, ಬ್ರಹ್ಮಾವರ ಪಿಎಸ್ಐ ರಾಘವೇಂದ್ರ, ಕೋಟ ಪಿಎಸ್ಐ ರಫಿಕ್, ಉಡುಪಿ ಸಂಚಾರ ಠಾಣೆ ಪಿಎಸ್ಐ ನಿತ್ಯಾನಂದ ಗೌಡ, ನಗರ ಠಾಣೆ ಪಿಎಸ್ಐ ರವಿ, ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ಶ್ರೀಧರ ನಾಯ್ಕ್, ಅಮಾಸೆಬೈಲು ಪಿಎಸ್ಐ ಸೌಮ್ಯಾ, ಹೆಬ್ರಿ ಪಿಎಸ್ಐ ಸತೀಶ್ ಬಲ್ಲಾಳ್, ಕಾರ್ಕಳ ನಗರ ಠಾಣೆಯ ಪಿಎಸ್ಐ ನಂಜಾ‌ ನಾಯ್ಕ್, ಗ್ರಾಮಾಂತರ ಠಾಣೆಯ ನಾಸೀರ್ ಹುಸೇನ್, ಶಿರ್ವಾ ಪಿಎಸ್ಐ ಅಬ್ದುಲ್ ಖಾದರ್, ಪಡುಬಿದ್ರೆ ಪಿಎಸ್ಐ ಸತೀಶ್, ಶಂಕರನಾರಾಯಣ ಠಾಣೆಯ ಪಿಎಸ್ಐ ಪ್ರಕಾಶ್ ಹಾಗೂ ಸಿಬ್ಬಂದಿಗಳು, ಸಹದೇವ ಆರ್.ಎಸ್.ಐ ಡಿಎಆರ್ ಘಟಕ ಉಡುಪಿ, ಪ್ರೊಬೆಶನರಿ ಪಿಎಸ್ಐಗಳು ಈ ಕಾರ್ಯಾಚರಣೆ ನಡೆಸಿದ್ದರು.

ವರದಿ- ಯೋಗೀಶ್ ಕುಂಭಾಸಿ

Comments are closed.