ಮಂಗಳೂರು, ಎಪ್ರಿಲ್.1: ಕರಾವಳಿಯಲ್ಲಿ ಹುಟ್ಟಿ ಬೆಳೆದಿದ್ದ ಪ್ರತಿಷ್ಠಿತ ವಿಜಯ ಬ್ಯಾಂಕ್ ಇಂದು ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಂಡಿದೆ. ಇಂದಿನಿಂದ ವಿಜಯ ಬ್ಯಾಂಕ್, ದೇನಾ ಬ್ಯಾಂಕ್ ಜೊತೆ ಸೇರಿ ಬ್ಯಾಂಕ್ ಆಫ್ ಬರೋಡ ಆಗಿ ಪರಿವರ್ತನೆಗೊಂಡಿದೆ.
ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಜಯಾ ಬ್ಯಾಂಕನ್ನು ವಿಲೀನ ಮಾಡಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಸೋಮವಾರ ನಗರದ ಮಲ್ಲಿಕಟ್ಟೆಯಲ್ಲಿರುವ ವಿಜಯಾ ಬ್ಯಾಂಕ್ ಶಾಖೆಯ ಮುಂದೆ ಕರಾಳ ದಿನ ಆಚರಿಸಿತು.
ಈ ವೇಳೆ ಮಾಜಿ ಶಾಸಕ ಜೆ.ಆರ್. ಲೋಬೋ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಪ್ರತೀಕ ಎಂದೇ ಹೇಳಲಾಗುತ್ತಿದ್ದ ವಿಜಯ ಬ್ಯಾಂಕನ್ನು ಕೇಂದ್ರ ಸರಕಾರ ಕರಾವಳಿಗರ ಭಾರೀ ವಿರೋಧದ ನಡುವೆಯೂ ದೇನಾ ಹಾಗೂ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಳಿಸಿದೆ ಎಂದು ಆರೋಪಿಸಿದರು.
ಲಾಭದಲ್ಲಿ ನಡೆಯುತ್ತಿದ್ದ ವಿಜಯಾ ಬ್ಯಾಂಕನ್ನು ಗುಜರಾತ್ ಮೂಲದ ಬ್ಯಾಂಕ್ ಗಳೊಂದಿಗೆ ವಿಲೀನ ಮಾಡುವ ನಿರ್ಧಾರವನ್ನು ಕೇಂದ್ರ ಸರಕಾರ ಪ್ರಕಟಿಸಿದಾಗ ಇಡೀ ಕರಾವಳಿ ಈ ಜನವಿರೋಧಿ ತೀರ್ಮಾನವನ್ನು ವಿರೋಧಿಸಿ ಪ್ರತಿಭಟನೆ ಮಾಡಿದೆ. ಆದರೆ ಎಲ್ಲಾ ನಿರೀಕ್ಷೆಗಳನ್ನು ಮೀರಿ ಇಂದಿನಿಂದ ವಿಜಯಾ ಬ್ಯಾಂಕ್ ತನ್ನ ಅಸ್ಥಿತ್ವ ಕಳೆದುಕೊಂಡಿದೆ. ಎಪ್ರಿಲ್ ಒಂದರಂದು ಸುಂದರ ರಾಮ ಶೆಟ್ಟರ ಕನಸು ಕರಾಳ ದಿನವಾಗಿ ಇತಿಹಾಸದ ಪುಟ ಸೇರಿದೆ. ಈ ಮೂಲಕ ಕರಾವಳಿಯ ಹೆಸರೊಂದು ಶಾಶ್ವತವಾಗಿ ಅಳಿಸಿ ಹೋಗಿದೆ ಎಂದು ಲೋಬೋ ವಿಷಾದ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮಿಥುನ್ ರೈ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕ ಮೊಯ್ದಿನ್ ಬಾವಾ ಪಕ್ಷದ ಮುಖಂಡರಾದ ಶಶಿಧರ ಹೆಗ್ಡೆ, ನಝೀರ್ ಬಜಾಲ್, ರಾಧಾಕೃಷ್ಣ, ಯು.ಬಿ.ಸಲೀಂ, ಸುರೇಶ್ ಶೆಟ್ಟಿ, ರಮಾನಂದ ಪೂಜಾರಿ, ಸಂತೋಷ್ ಶೆಟ್ಟಿ, ಹಯಾತುಲ್ ಕಾಮಿಲ್, ಪುರುಷೋತ್ತಮ ಚಿತ್ರಾಪುರ, ಎ.ಸಿ.ವಿನಯ ರಾಜ್, ಮಹಾಬಲ ಮಾರ್ಲ, ಭಾಸ್ಕರ ರಾವ್, ಜೆ. ಅಬ್ದುಲ್ ಸಲೀಂ, ಗಿರೀಶ್ ಆಳ್ವ, ಸಬಿತಾ ಮಿಸ್ಕಿತ್, ಮರಿಯಮ್ಮ ಥೋಮಸ್, ಶಾಂತಳಾ ಗಟ್ಟಿ, ವಹಾಬ್ ಕುದ್ರೋಳಿ ಮತ್ತಿತರರು ಪಾಲ್ಗೊಂಡಿದ್ದರು.
Comments are closed.