ಕರಾವಳಿ

ದೇಶಾದ್ಯಂತ ನಾಳೆ ಬೆಳ್ಳಿತೆರೆಗೆ ಅಪ್ಪಳಿಸಲಿದೆ “ಕಟಪಾಡಿ ಕಟ್ಟಪ್ಪ” : 200 ಚಿತ್ರಮಂದಿರಗಳಲ್ಲಿ ಬಿಡುಗಡೆ

Pinterest LinkedIn Tumblr

ಮಂಗಳೂರು, ಮಾರ್ಚ್. 28 : ಬ್ರಹ್ಮಾವರ್ ಮೂವೀಸ್ ಸಂಸ್ಥೆಯಡಿ ನಿರ್ಮಾಣಗೊಂಡ ಬಹು ನಿರೀಕ್ಷಿತ ತುಳು ಚಲನಚಿತ್ರ “ಕಟಪಾಡಿ ಕಟ್ಟಪ್ಪ” ನಾಳೆ (ಮಾರ್ಚ್ 29ರಂದು) ದೇಶ ವಿದೇಶಗಳ 200ಕ್ಕೂ ಅಧಿಕ ಥಿಯೇಟರ್​ನಲ್ಲಿ ಬಿಡುಗಡೆಗೊಳ್ಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಚಿತ್ರದ ನಿರ್ಮಾಪಕ ಹಾಗೂ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್, ತುಳು ಚಿತ್ರರಂಗದ ಮಾರುಕಟ್ಟೆಯನ್ನು ವಿಸ್ತರಿದುವ ಉದ್ದೇಶದಿಂದ, ಇತರ ಚಿತ್ರಗಳಿಗೂ ಅನುಕೂಲವಾಗುವ ಉದ್ದೇಶದೊಂದಿಗೆ ಪ್ರಥಮ ಬಾರಿಗೆ ಈ ಚಿತ್ರ ದೇಶಾದ್ಯಂತ 200 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ತೆರೆ ಕಾಣಲಿದೆ.

ಖ್ಯಾತ ನಟ, ನಿರ್ದೇಶಕ ಜೆ.ಪಿ.ತೂಮಿನಾಡ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಖ್ಯಾತ ಚಿತ್ರ ನಿರ್ದೇಶಕ, ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ ಬೈಲ್, ಸ್ಥಳೀಯ ಪ್ರಮುಖರಾದ ಉದಯಪೂಜಾರಿ ಬಳ್ಳಾಲ್ ಬಾಗ್, ಯಜ್ಞೇಶ್ವರ್ ಬರ್ಕೆ, ಪಮ್ಮಿ ಕೊಡಿಯಾಲ್ ಬೈಲ್, ಇವರೊಂದಿಗೆ ತುಳು ಚಿತ್ರರಂಗದ ದಿಗ್ಗಜರಾದ ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಸೂರಜ್ ಪಾಂಡೇಶ್ವರ, ಧೀರಜ್ ನೀರುಮಾರ್ಗ, ರಂಜಿತಾ ಶೇಟ್, ದೀಪ್ತಿ ರಾವ್, ನಾಯಕಿ ನಟಿ ಚರಿಷ್ಮಾ ಸಾಲಿಯಾನ್, ಪ್ರೇಮ್ ಶೆಟ್ಟಿ ಮತ್ತಿತರ ನಟ ನಟಿಯರು ಅಭಿನಯಿಸಿದ್ದಾರೆ ಎಂದರು.

ಚಿತ್ರ ನಿರ್ದೇಶಕ, ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಕಟಪಾಡಿ ಕಟ್ಟಪ್ಪ ಸಿನಿಮಾ ಮಾರ್ಚ್ 29 ರಂದು ಬಿಡುಗಡೆಯಾಗಲಿದ್ದು 200 ಕ್ಕೂ ಅಧಿಕ ಥಿಯೇಟರ್​ನಲ್ಲಿ ಪ್ರದರ್ಶನ ಆಗಲಿದೆ. ಇದು ಕೋಸ್ಟಲ್ ವುಡ್ ಮಟ್ಟಿಗೆ ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಮಾರ್ಚ್ 29 ರಂದು ಸುಮಾರು 9 ಕನ್ನಡ ಸಿನಿಮಾಗಳು ಬಿಡುಗಡೆಯಾಗಲಿದ್ದು, ಇದರ ನಡುವೆ ತುಳು ಸಿನಿಮಾ‌ಗೂ ಕೂಡ ಥಿಯೇಟರ್ ಹೊಂದಾಣಿಕೆ ಮಾಡಲಾಗಿದೆ. ತುಳು ಸಿನಿಮಾಗಳೆಂದರೆ ಅವುಗಳಿಗೆ ಮಾರುಕಟ್ಟೆ ಇರುವುದು ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡಿನ ಜಿಲ್ಲೆಗಳಲ್ಲಿ ಮಾತ್ರ. ಇಲ್ಲಿನ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ತುಳು ಸಿನಿಮಾ ನಿರ್ಮಾಣವಾಗುತ್ತವೆ. ಇದರಿಂದ ನಿರ್ಮಾಪಕರು ಹೆಚ್ಚಿನ ಹೂಡಿಕೆ ಮಾಡಲು ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಟಪಾಡಿ ಕಟ್ಟಪ್ಪ ತುಳು ಸಿನಿಮಾದ ಮೂಲಕ ಹೊಸ ಪ್ರಯತ್ನವನ್ನು ರಾಜೇಶ್ ಬ್ರಹ್ಮಾವರ್ ಮಾಡಿದ್ದಾರೆ ಎಂದರು.

ನಿರ್ಮಾಪಕ ರಾಜೇಶ್ ಬ್ರಹ್ಮಾವರ ಅವರ ಪ್ರಯತ್ನಗಳಿಂದ ಈ ತುಳು ಸಿನಿಮಾ ಹೊಸ ಪ್ರಯತ್ನಗಳಿಗೆ ಮುಂದಾಗಿದೆ. ಸಾಧಾರಣವಾಗಿ ಚಿತ್ರ ಬಿಡುಗಡೆ ಬಳಿಕ ಜಾಹೀರಾತು ನೀಡಿ ಪ್ರೇಕ್ಷಕರನ್ನು ಆಕರ್ಷಿಸುವುದು ಸಾಮಾನ್ಯ. ಆದರೆ, ಕರಾವಳಿಯ ಭಾಗವನ್ನು ಹೊರತುಪಡಿಸಿ ರಾಜ್ಯದ ಇತರೆಡೆಗೆ ಅಲ್ಲಿನ ತುಳು ಭಾಷಿಕರನ್ನು ಒಟ್ಟು ಮಾಡಿ, ಅದರ ಆಧಾರದಲ್ಲಿ ಚಿತ್ರ ಮಂದಿರವನ್ನು ಬುಕ್ ಮಾಡಲಾಗಿದೆ. ಥಿಯೇಟರ್ ಮತ್ತು ಪ್ರೇಕ್ಷಕರ ಅನುಕೂಲಕ್ಕೆ ತಕ್ಕಂತೆ ಥಿಯೇಟರ್​ನಲ್ಲಿ ಸಮಯ ಮತ್ತು ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ತುಳು ಸಿನಿಮಾಕ್ಕೆ ರಾಜ್ಯ, ಹೊರರಾಜ್ಯದ ಮಾರುಕಟ್ಟೆಯನ್ನು ಬಳಸುವ ಪ್ರಯತ್ನ ಮಾಡಲಾಗಿದೆ.

ವಿದೇಶದಲ್ಲೂ ಮಾರ್ಚ್ 29 ರಂದು ಚಿತ್ರ ಬಿಡುಗಡೆ ಆಗುತ್ತಿರುವುದು ವಿಶೇಷ. ಅಲ್ಲಿನ ತುಳು ಭಾಷಿಕರನ್ನು ಒಟ್ಟು ಗೂಡಿಸಿ ಕೆಲವೆಡೆ ಥಿಯೇಟರ್ ಬದಲಿಗೆ ಸಭಾಂಗಣದಲ್ಲಿ ತಂತ್ರಜ್ಞಾನ ಬಳಸಿ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಶ್ರೀಲಂಕಾ, ಸಿಂಗಾಪುರದಲ್ಲಿ ಈಗಾಗಲೇ ಪ್ರದೇಶ ನಿರ್ಧರಿಸಲಾಗಿದೆ. ದುಬೈ, ಅಮೆರಿಕಾದಲ್ಲೂ ಚಿತ್ರ ಪ್ರದರ್ಶಿಸುವ ಬಗ್ಗೆ ಸಂಬಂಧಿಸಿದವರ ಜತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ವಿಜಯ ಕುಮಾರ್ ಚಿತ್ರದ ಬಗ್ಗೆ ವಿವರ ನೀಡಿದರು.

ಚಿತ್ರಕ್ಕೆ ರುದ್ರಮುನಿ ಬೆಳಗೆರೆ ಛಾಯಾಗ್ರಹಣವಿದ್ದು, ಪ್ರಕಾಶ್ ಹಾಗೂ ಲೋಯ್ ಅವರ ಸಂಗೀತವಿದೆ. ಗಣೇಶ್ ನಿರ್ಚಾಲ್ ಸಂಕಲನವಿದ್ದು, ಶರತ್ ಪೂಜಾರಿ ಬರ್ಕೆ ವಸ್ತ್ರಾಲಂಕಾರ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಜೆ.ಪಿ.ತೂಮಿನಾಡ್, ಚಿತ್ರದ ನಾಯಕಿ ನಟಿ ಚರಿಷ್ಮಾ ಸಾಲಿಯಾನ್,ನಾಯಕ ನಟ ಉದಯ ಪೂಜಾರಿ ಬಳ್ಳಾಲ್ ಬಾಗ್ ಉಪಸ್ಥಿತರಿದ್ದರು.

Sathish Kapikad – Mob:9035089084

Comments are closed.