ಮಂಗಳೂರು, ಮಾರ್ಚ್.27: ಮತದಾನದ ಜಾಗೃತಿ ಮೂಡಿಸಲು ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ನಿರ್ಣಯದಂತೆ ಮ್ಯಾರಾಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಮಾ.31ರಂದು ಬೆಳಗ್ಗೆ 7 ಗಂಟೆಗೆ ಮಂಗಳಾ ಕ್ರೀಡಾಂಗಣದಲ್ಲಿ ಸ್ಪರ್ಧೆ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎಪ್ರಿಲ್ 18ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ ದ.ಕ. ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಭಾಗಿತ್ವದಲ್ಲಿ 16 ವರ್ಷದೊಳಗಿನ ಹಾಗೂ 16 ವರ್ಷ ಮೇಲ್ಪಟ್ಟ ಎರಡು ವಿಭಾಗಗಳಲ್ಲಿ ಈ ಮ್ಯಾರಥಾನ್ ನಡೆಯಲಿದೆ.
16 ವರ್ಷದೊಳಗಿನ ಮ್ಯಾರಥಾನ್ 6 ಕಿ.ಮೀ. ಹಾಗೂ 16 ವರ್ಷ ಮೇಲ್ಪಟ್ಟ ಮ್ಯಾರಥಾನ್ 18 ಕಿ.ಮೀ.ಗಳಲ್ಲಿ ನಡೆಯಲಿದೆ. ಉಳಿದಂತೆ ಮ್ಯಾರಥಾನ್‌ಗಳಲ್ಲಿ ಭಾಗವಹಿಸಲು ಸಾಧ್ಯವಾಗದ ಹಿರಿಯ ನಾಗರಿಕರು, ಸಾರ್ವಜನಿಕರಿಗಾಗಿ ಮತದಾನದ ಕಡೆಗೆ ನಮ್ಮ ನಡಿಗೆ 2019 ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಅವರು ಮಾತನಾಡಿ, 16 ವರ್ಷದೊಳಗಿನ ಬಾಲಕ ಬಾಲಕಿಯರಿಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಿಂದ ಮಣ್ಣಗುಡ್ಡೆ ರಸ್ತೆ, ನ್ಯೂಚಿತ್ರಾ, ರಥಬೀದಿ, ಮಂಗಳೂರು ಸೆಂಟ್ರಲ್ ಮಾರ್ಕೆಟ್, ಹಂಪನಕಟ್ಟೆ ರಸ್ತೆ ಮೂಲಕ ಸಾಗಿ ಪಿವಿಎಸ್ ವೃತ್ತ, ಬಳ್ಳಾಲ್‌ಬಾಗ್, ಲಾಲ್‌ಬಾಗ್, ದಿವ್ಯದೀಪ ಟವರ್ಸ್ ಮುಂಭಾಗದಲ್ಲಿ ತಿರುಗಿ ಮಂಗಳಾ ಕ್ರೀಡಾಂಗಣದಲ್ಲಿ ಸಮಾರೋಪಗೊಳ್ಳಲಿದೆ. 16 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳಿಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಿಂದ ಮಣ್ಣಗುಡ್ಡ ರಸ್ತೆ, ನ್ಯೂಚಿತ್ರಾ, ರಥಬೀದಿ, ಶರವು ದೇವಸ್ಥನ ರಸ್ತೆ, ಕಾರ್ನಾಡ್ ಸದಾಶಿವ ರಾವ್ ರಸ್ತೆ, ನವಭಾರತ ವೃತ್ತ, ಪಿವಿಎಸ್ ವೃತ್ತ, ಸಲ್ಮಾ ಆರ್ಕೆಡ್, ಕದ್ರಿ ದೇವಸ್ಥಾನ ರಸ್ತೆ, ಬಿಜೈ, ಕೆಎಸ್ಸಾರ್ಟಿಸಿ, ಲಾಲ್‌ಬಾಗ್ ವೃತ್ತದಿಂದ ಯೂಟರ್ನ್ ಪಡೆದು ಪಂಚಮಿ ಕಾಂಪ್ಲೆಕ್ಸ್, ಕಾಪಿಕಾಡು, ದಡ್ಡಲಕಾಡು, ಉರ್ವಾಸ್ಟೋರ್, ಅಶೋಕ್ ನಗರ, ಉರ್ವಾಮಾರ್ಕೆಟ್, ಲೇಡಿಹಿಲ್ ಮೂಲಕ ಹಾದು ಮಂಗಳಾ ಕ್ರೀಡಾಂಗಣ ತಲುಪಲಿದೆ. ಮತದಾನದ ಕಡೆಗೆ ನಮ್ಮ ನಡಿಗೆ ಮಂಗಳಾ ಕ್ರೀಡಾಂಗಣದಿಂದ ಮಣ್ಣಗುಡ್ಡೆ, ಬಳ್ಳಾಲ್‌ಬಾಗ್, ಲಾಲ್‌ಬಾಗ್, ಲೇಡಿಹಿಲ್ ಸಾಗಿ ಮಂಗಳಾ ಕ್ರೀಡಾಂಗಣ ಸೇರಲಿದೆ. ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗುವ ಕ್ರೀಡಾಪಟುಗಳನ್ನು ನಗದು ಬಹುಮಾನ ನೀಡಿ ಪುರಸ್ಕರಿಸಲಾಗುವುದು ಎಂದು ಹೇಳಿದರು.
ಮ್ಯಾರಥಾನ್ ಸ್ಪರ್ಧೆಯಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ ಅವರು, ಆಸಕ್ತರು ತಮ್ಮ ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನು ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಇವರಿಗೆ ಮಾ. 29ರೊಳಗೆ ಇಮೇಲ್ (adyssdk@yahoo.com) ಕಳುಹಿಸಿಕೊಡುವಂತೆ ಹಾಗೂ ಮಾ.31ರಂದು ಬೆಳಗ್ಗೆ 6:30ರ ಒಳಗೆ ಕ್ರೀಡಾಂಗಣದಲ್ಲಿ ಹಾಜರಿರಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನೆಹರೂ ಯುವ ಕೇಂದ್ರದ ಸಂಯೋಜಕ ರಘುವೀರ್ ಸೂಟರ್‌ಪೇಟೆ, ಮನಪಾ ಜಂಟಿ ಆಯುಕ್ತರಾದ ಗಾಯತ್ರಿ, ಜಿಲ್ಲಾ ಪಂಚಾಯತ್‌ನ ಸುಧಾಕರ್ ಉಪಸ್ಥಿತರಿದ್ದರು.
Comments are closed.